ಕೆಆರ್‌ಎಸ್‌ ಉನ್ನತ್ತೀಕರಣದಿಂದ ಯಾವುದೇ ತೊಂದರೆ ಆಗಲ್ಲ : ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

SR Maheshಕೆ.ಆರ್.ಎಸ್, ಡಿ.8- ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‍ಎಸ್ ಉನ್ನತೀಕರಿಸುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಈ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯಬಾರದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವ ಸಂಬಂಧ ಕೆಆರ್‍ಎಸ್‍ನಲ್ಲಿ ಸ್ಥಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸ್ನಿ ಲ್ಯಾಂಡ್ ಮದರಿಯಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನರನ್ನು ತಪ್ಪು ದಾರಿಗೆಳೆಯಬಾರದು, ಮುಖ್ಯಮಂತ್ರಿಗಳ ಸೂಚನೆಯಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ವಿಸ್ತೃತ ಯೋಜನೆ ಸಿದ್ದಪಡಿಸಲಾಗುತ್ತಿದೆ. ಸರ್ಕಾರಿ ಹಾಗೂ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಬಳಸಲಾಗುತ್ತಿದೆ. ಇದರಿಂದ ಉದ್ಯೋಗವಕಾಶ ಹೆಚ್ಚಾಗಲಿದೆ ಎಂದರು.

ರಾಜ್ಯದಲ್ಲಿ ಸಾಕಷ್ಟು ಮೂಲಸೌಲಭ್ಯಗಳಿದ್ದು, ಸುಮಾರು 25ಸಾವಿರ ಪ್ರವಾಸಿ ತಾಣಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಒಂದೊಂದು ಸಾವಿರ ಪ್ರವಾಸಿ ತಾಣಗಳನ್ನು ಘೋಷಣೆ ಮಾಡಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಇದರ ಸದ್ಬಳಕೆ ಆಗಬೇಕು. ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮಾಡುವವರಿಗೆ ಒಂದರಿಂದ ಎರಡೂ ವರೆ ಕೋಟಿ ಸಹಾಯಧನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ವಿಶ್ವದ ಅನೇಕ ದೇಶಗಳು ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಹೆಚ್ಚು ಆದಾಯ ಗಳಿಸುತ್ತಿವೆ. ಕೆಆರ್‍ಎಸ್‍ನ ಬೃಂದಾವನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇಲ್ಲಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮೈಸೂರು ಪಾರಂಪರಿಕ ತಾಣ ಎಂಬ ಹೆಸರು ಹೊಂದಿದೆ. ಮೈಸೂರು, ಶ್ರೀರಂಗಪಟ್ಟಣ, ನಂಜನಗೂಡು, ಮಳವಳ್ಳಿ ಮತ್ತಿತರ ಪ್ರದೇಶಗಳು ಹೆಸರಾಂತ ಪ್ರವಾಸಿ ತಾಣಗಳನ್ನು ಹೊಂದಿವೆ. ಕೆಆರ್‍ಎಸ್‍ಅನ್ನು ಡಿಸ್ನಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸಲಿದ್ದಾರೆ ಎಂದರು.

Facebook Comments