ವಿಚಾರಣೆಗೆ ಹಾಜರಾಗಿ ಪೊಲೀಸರಿಗೆ ದಾಖಲೆ ಸಲ್ಲಿಸಿದ ಶಾಸಕ ವಿಶ್ವನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ರಾಜಾನುಕುಂಟೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಹತ್ಯೆ ಮಾಡಲು ಸಂಚು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಡಿಯೋ ವಿಡಿಯೋ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ.

ಮತ್ತೆ ಅವರು ವಿಚಾರಣೆಗೆ ಕರೆದಾಗ ಬರಬೇಕೆಂದು ಸೂಚಿಸಿದ್ದಾರೆ. ಯಾವಾಗ ವಿಚಾರಣೆಗೆ ಕರೆದರೂ ಬರುತ್ತೇನೆ ಎಂದು ಹೇಳಿದರು. ಗೋಪಾಲಕೃಷ್ಣ ಅವರನ್ನು ಬಂಧಿಸುವಂತೆ ನಾನು ಹೇಳಿಲ್ಲ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು. ಕುಳ್ಳ ದೇವರಾಜ್ ಕೊಟ್ಟ ಕ್ಷಮಾಪಣೆ ಪತ್ರ, ಪೆನ್‍ಡ್ರೈವ್ ಎಲ್ಲವನ್ನೂ ಪೊಲೀಸರಿಗೆ ನೀಡಿದ್ದೇನೆ.

ಪೆನ್‍ಡ್ರೈವ್ ನೋಡಿದಾಗ ಏನೇನು ವ್ಯವಹಾರವಿತ್ತೋ, ಸುಪಾರಿ ವಿಚಾರದ ಮಾತುಕತೆಯನ್ನು ಮಾತ್ರ ಆಡಿಯೋ ವಿಡಿಯೋ ತೆಗೆದುಕೊಂಡಿದ್ದು, ಈಗ ಎಲ್ಲವನ್ನೂ ಪೊಲೀಸರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು. ನಾನು ಕುಳ್ಳ ದೇವರಾಜ್ ಅವರನ್ನು ಏಕೆ ಭೇಟಿ ಮಾಡಲಿ, ಎಫ್‍ಐಆರ್ ಆದ ತಕ್ಷಣ ಬಂಧನ ಆಗಬೇಕಷ್ಟೆ ಎಂದು ಹೇಳಿದರು.

ಕುಳ್ಳ ದೇವರಾಜ್ ನನ್ನ ರೈಟ್ ಹ್ಯಾಂಡ್ ಆಗಿದ್ದರೆ ಗೋಪಾಲಕೃಷ್ಣ ಅವರು ಏಕೆ ಅವರ ಹತ್ತಿರ ಇಟ್ಟುಕೊಳ್ಳುತ್ತಾರೆ. ನನ್ನ ಬಳಿ ಬೇಕಾದಷ್ಟು ಜನ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಅದನ್ನೆಲ್ಲ ಇಟ್ಟುಕೊಂಡು ಈ ರೀತಿ ತೇಜೋವಧೆ ಮಾಡುವುದು ತಪ್ಪು. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮೊದಲಿನಿಂದಲೂ ನನ್ನ ಮೇಲೆ ಸಂಚು ನಡೆಯುತ್ತಿದೆ. ನಾನು ಕೂಡ ಈ ಬಗ್ಗೆ ಅಸಡ್ಡೆ ಮಾಡಿದ್ದೆ ಎನ್ನಿಸುತ್ತದೆ.

ಆಡಿಯೋ ಕೇಳಿದ ಮೇಲೆಯೇ ನನಗೆ ಗೊತ್ತಾಗಿದ್ದು. ಏನೂ ಗೊತ್ತಿಲ್ಲದೆ ದೂರು ಕೊಡಲು ಸಾಧ್ಯವಿಲ್ಲ. ಮೊನ್ನೆ ರಾತ್ರಿ 7.30ರಲ್ಲಿ ವಿಡಿಯೋ ಸಿಕ್ಕಿತ್ತು. ಹಾಗಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಬೇಕಾದರೆ ಹೆಚ್ಚಿನ ತನಿಖೆ ಮಾಡಿಸೋಣ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

Facebook Comments