ಐಟಿಗೆ ಕಾಂಗ್ರೆಸ್ ನಾಯಕರೇ ಟಾರ್ಗೆಟ್ : ಎಸ್.ಆರ್.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, – ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಟಾರ್ಗೆಟ್ ಮಾಡಿ, ಐಟಿ ದಾಳಿಯಾಗುತ್ತಿವೆ. ಕಾಂಗ್ರೆಸ್ ಪಕ್ಷದವರ ಆತ್ಮಸ್ಥೈರ್ಯ ಕುಂದಿಸುವ ಕೆಲಸವಾಗುತ್ತಿದೆ. ಆದರೆ ನಾವು ಯಾವುದೇ ಐಟಿ ದಾಳಿಗೂ ಜಗ್ಗುವವರಲ್ಲ. ಅವರು ಬೇಕಾದಾಗ ತನಿಖೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನಾತ್ಮಕ ಎಲ್ಲ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ದೇಶದಲ್ಲಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ದಾಳಿ ಮೂಲಕ ಬಿಜೆಪಿ ಸಶಕ್ತವಾಗುತ್ತೆ ಅನ್ನೋದು ಹಗಲುಗನಸು ಎಂದರು. ಕೇಂದ್ರ ಬಿಜೆಪಿ ದ್ವೇಷದ ರಾಜಕಾರಣ ಮಾಡೋದು ಬಿಡಲಿ. ಕಾಂಗ್ರೆಸ್ ಪಕ್ಷದ ಮುಖಂಡರು ಸಾರ್ವಜನಿಕ ಬದುಕಿನಿಂದ ನಿರ್ಗಮಿಸಬೇಕು; ಇಲ್ಲವೇ ಬಿಜೆಪಿಗೆ ಬರಬೇಕು ಅನ್ನೋ ದುರುದ್ದೇಶದಿಂದ ಪಕ್ಷದ ಒಳ್ಳೆಯ ಮುಖಂಡರ ಮೇಲೆ ಐಟಿ ದಾಳಿಯಾಗುತ್ತಿದೆ ಎಂದು ಗುಡುಗಿದರು.

ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂಬ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಇದು ನಮಗೆ ರಾಜಕೀಯ ಪ್ರೇರಿತ ದಾಳಿ ಎಂದು ಅನಿಸುತ್ತಿದೆ. ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ನಮ್ಮ ಅನಿಸಿಕೆಗಳನ್ನು ನಾವು ಹೇಳಿದ್ದೀವಿ ಅಷ್ಟೇ ಎಂದರು.

ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿದ ಅವರು, ನನಗೆ ಕಾರಣ ಗೊತ್ತಿಲ್ಲ, ಹೇಗೆ ಪ್ರತಿಕ್ರಿಯಿಸಲಿ ಎಂದು ತಿಳಿಸಿದರು.
ಯಾವುದೇ ಕಷ್ಟ, ನೋವು ಬಂದರೂ ಆತ್ಮಹತ್ಯೆ ಮಾಡಿಕೊಳ್ಳೋದು ಸರಿಯಲ್ಲ. ಯಾವ ಕಾರಣಕ್ಕೆ ಅವರು ಮಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಐಟಿಯವರು ಕಿರುಕುಳ ನೀಡಿದ್ದಾರೆ ಅನ್ನೋ ಮಾಹಿತಿ ನನಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ವಿಧಾನಸಭೆ ಅಧಿವೇಶನದೊಳಗೆ ಮಾಧ್ಯಮ ನಿರ್ಬಂಧ ಒಳ್ಳೆ ಕೆಲಸವಲ್ಲ. ಸಂವಿಧಾನದಲ್ಲಿ ಫ್ರೀಡಂ ಆಫ್ ಪ್ರೆಸ್‍ಗೆ ಅವಕಾಶವಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅದನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅದನ್ನು ಮೊಟಕುಗೊಳಿಸುವುದು ಒಳ್ಳೆಯದಲ್ಲ. ಮೇಲ್ಮನೆಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಇಲ್ಲ. ಸಭಾಪತಿಯವರು ಎಲ್ಲರಿಗೂ ಅವಕಾಶ ಕಲ್ಪಿಸಿದ್ದಾರೆ. ಮಾಧ್ಯಮದವರ ಕಣ್ಣಿಗೆ ಪಟ್ಟಿ ಕಟ್ಟಿ, ಅವರನ್ನು ದೂರವಿಟ್ಟು ಕಲಾಪ ನಡೆಸೋದು ನನಗೆ ವೈಯಕ್ತಿಕ ದೃಷ್ಟಿಯಿಂದ ಸರಿಯಲ್ಲ. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದರು.

ಬಿಜೆಪಿ ಸರ್ಕಾರ ಪಂಚೇಂದ್ರಿಯ ಇಲ್ಲದ ಸರ್ಕಾರ. ಚರ್ಮಗೇಡಿ ಸರಕಾರವೆಂದು ವಾಗ್ದಾಳಿ ನಡೆಸಿದ ಅವರು, ಅಧಿವೇಶನದಲ್ಲಿ ನೆರೆ ಚರ್ಚೆಗೆ ಆಡಳಿತ ಪಕ್ಷ ನಿರಾಕರಿಸಿತು. ಎಲ್ಲಿ ತಮ್ಮ ಹುಳುಕು ಹೊರಬರುತ್ತವೆ ಎಂದು ಹೆದರಿ ಮೂರೇ ದಿನಕ್ಕೆ ಅಧಿವೇಶನ ಮೊಟಕುಗೊಳಿಸಿದೆ. ವಾಡಿಕೆಯಂತೆ ಬೆಳಗಾವಿಯಲ್ಲಿ ಅಧಿವೇಶನ ನಡೆಬೇಕಿತ್ತು.

ಅಲ್ಲಿ ಪರಿಹಾರ ಕಾರ್ಯಕ್ಕೆ ತೊಂದರೆ ಆಗುತ್ತೆ ಅನ್ನೋ ಸುಳ್ಳು ಸಬೂಬಿನಿಂದ ಬೆಂಗಳೂರಿನಲ್ಲಿ ಅಧಿವೇಶನ ಮಾಡ್ತಿದ್ದೇವೆ ಎಂದರು. ಬೆಂಗಳೂರಿನಲ್ಲಿ 30ದಿನ ಅಧಿವೇಶನ ನಡೆಸಬೇಕಿತ್ತು. ಮೂರು ದಿನಕ್ಕೆ ಅಧಿವೇಶನ ಮೊಟಕುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

ಪ್ರತಿಪಕ್ಷವನ್ನು ಎದುರಿಸೋ ಸಾಮಥ್ರ್ಯ ಬಿಜೆಪಿಗಿಲ್ಲ. ಸರ್ಕಾರ ನೆರೆ ಸಂತ್ರಸ್ತರಿಗೆ ಸಂಪೂರ್ಣ ಮನೆ ಬಿದ್ದವರಿಗೆ 5ಲಕ್ಷದಿಂದ 10 ಲಕ್ಷ ಕೊಡಿ ಎಂದಿದ್ದೇವೆ. ರಾಷ್ಟ್ರೀಯ ವಿಪತ್ತು ಘೋಷಿಸಬೇಕೆಂದರೂ ಸರ್ಕಾರ ನಿರಾಕರಿಸಿದೆ. ಕಣ್ಣು ಇಲ್ಲದ ಕುರುಡು ಸರ್ಕಾರ, ಬಾಯಿ ಇಲ್ಲದ ಮೂಗ ಸರ್ಕಾರ, ಕಿವಿಯಿಲ್ಲದ ಕಿವುಡು ಸರ್ಕಾರ ಎಂದು ಕಿಡಿಕಾರಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ