‘ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ’ ಎಂಬ ಸಿದ್ದು ಹೇಳಿಕೆಯಲ್ಲಿ ಹುರುಳಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.12- ಬಿಜೆಪಿ , ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಜೊತೆ ಸರ್ಕಾರ ರಚಿಸಿ ಈಗ ಈ ರೀತಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಇತ್ತೀಚೆಗೆ ಅವರು ಹಿಟ್ ಅಂಡ್ ರನ್ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಸವಕಲು ನಾಣ್ಯವಾಗಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕರೇ ಅವರ ವಿರುದ್ದ ತಿರುಗಿ ಬಿದ್ದಿದ್ದಾರೆ. ಒಂದು ವೇಳೆ ಒಳಒಪ್ಪಂದ ಮಾಡಿಕೊಂಡಿದ್ದರೆ ಜೆಡಿಎಸ್‍ನವರಿಗೆ ರಾಜೀನಾಮೆ ನೀಡುತ್ತಿದ್ದರು. ಕಾಂಗ್ರೆಸ್‍ನವರು ಮಾತ್ರ ರಾಜೀನಾಮೆ ನೀಡುತ್ತಿದ್ದರು. ಅಸಮಾಧಾನಗೊಂಡ ಎರಡೂ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯನವರಿಗೆ ಪಕ್ಷದಿಂದ ಮಾನ್ಯತೆ ಸಿಗುತ್ತಿಲ್ಲ ಎಂದು ಟೀಕಿಸಿದರು.

ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ತೀರ್ಪು ಹೊರಬಂದ ನಂತರ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯಾಗಲಿದೆ. ಆನಂತರವೇ ವರಿಷ್ಠರು ಸಹ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.  ಹೊಸಕೋಟೆ ಕ್ಷೇತ್ರ ಬಿಟ್ಟು ಉಳಿದೆಡೆ ಗೊಂದಲವಿಲ್ಲ. ಯಾರೇ ಆದರೂ ಒಂದು ಕ್ಷೇತ್ರವನ್ನು ಬಿಟ್ಟುಕೊಡುವಾಗ ನೋವುಂಟಾ ಗುತ್ತದೆ. ಕಾರ್ಯಕರ್ತರು, ಬೆಂಬಲಿಗರ ಅಭಿಪ್ರಾಯ ಪಡೆಯಬೇಕು. ಈ ಗೊಂದಲವನ್ನು ವರಿಷ್ಠರು ಬಗೆಹರಿಸುತ್ತಾರೆ. ಅಭ್ಯರ್ಥಿಗಳು ಹೆಚ್ಚಿರುವ ಕಾರಣ ಗೊಂದಲ ಉಂಟಾಗಿದೆ ಎಂದು ತಿಳಿಸಿದರು.

ತನಿಖೆಗೆ ಆಗ್ರಹ: ಅಕ್ರಮ ಬಡಾವಣೆ, ನಿವೇಶನಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲಿ ಸೃಷ್ಟಿಸಿ ನೋಂದಣಿ ಮಾಡಿರುವ ಬಗ್ಗೆ ಸಿಸಿಬಿಗೆ ಹೆಚ್ಚುವರಿ ತನಿಖೆ ನಡೆಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.  ಸಿಸಿಬಿಗೆ ಹೆಚ್ಚುವರಿಯಾಗಿ ಈಗಾಗಲೇ ದೂರು ಕೊಟ್ಟಿದ್ದೇನೆ. ತನಿಖೆಗೆ ಸಹಕಾರ ನೀಡದಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕೋಟ್ಯಂತರ ರೂ. ಅವ್ಯವಹಾರವಾಗಿದೆ. ಕಂದಾಯ ಸಚಿವರು ಸಮಾಲೋಚನೆ ಮಾಡಿದ್ದಾರೆ. ಸ್ಮಶಾನ, ಕೆರೆ ಜಾಗ ಸೇರಿದಂತೆ ಸರ್ಕಾರಿ ಜಮೀನು ಸಹ ಸ್ವಾಹ ಮಾಡಲಾಗಿದೆ ಎಂದರು.

ನಿವೇಶನ ನೋಂದಣಿ ಮಾಡಿರುವುದನ್ನೇ ಸಾಫ್ಟ್‍ವೇರ್ ತಿರುಚಿ ನೋಂದಣಿ ಮಾಡಿ ರುವ ಆರೋಪ ಎದುರಾಗಿದೆ. ನಿವೇಶನ ತೆಗೆದುಕೊಳ್ಳುವವರಿಗೂ ಮೋಸವಾಗಿದೆ. ಈ ಹಿಂದೆಯೂ ಕೂಡ ಇಂತಹಪ್ರಕರಣದಲ್ಲಿ ಸಬ್‍ರಿಜಿಸ್ಟ್ರಾರ್‍ನ್ನು ಅಮಾನತುಗೊಳಿಸಲಾಗಿತ್ತು. ದಾಖಲಾತಿ ಇಲ್ಲದಿದ್ದರೂ ನೋಂದಣಿ ಮಾಡಿ ರುವ ಆರೋಪವಿದೆ ಎಂದು ತಿಳಿಸಿದರು.

Facebook Comments