ಸ್ಪಾಟ್ ಫಿಕ್ಸಿಂಗ್ ನಿಷೇಧ ಇಂದಿಗೆ ಅಂತ್ಯ : ಮತ್ತೆ ಫೀಲ್ಡ್ಗಿಳಿಯಲು ಶ್ರೀಶಾಂತ್ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.13-ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಆಪಾದನೆಗಾಗಿ ಏಳು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ವಿವಾದಿತ ಬೌಲರ್ ಶ್ರೀಶಾಂತ್ ಮೇಲಿನ ಬ್ಯಾನ್ ಇಂದು ಅಂತ್ಯಗೊಂಡಿದೆ. ನಾನು ಇಂದು ಸ್ವತಂತ್ರನಾಗಿದ್ದೇನೆ. ನಾನೀಗ ನಿಷೇಧದಿಂದ ಮುಕ್ತನಾಗಿದ್ದೇನೆ.

ನನಗೆ ಅತ್ಯಂತ ಪ್ರಿಯವಾದ ಕ್ರಿಕೆಟ್‍ನಲ್ಲಿ ಮತ್ತೆ ಆಡಲು ನಾನು ಸಿದ್ದ ಎಂದು ಶ್ರೀಶಾಂತ್ ಹೇಳಿದ್ದಾರೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಸ್ಪಾಟ್ ಫೀಕ್ಸಿಂಗ್ ಆಪಾದನೆಗೆ ವೇಗದ ಬೌಲರ್ ಗುರಿಯಾಗಿದ್ದರು.

ಭಾರತೀಯ ಕ್ರಿಕೆಟ್ ಮಂಡಳಿ ಅವರಿಗೆ ಅಜೀವ ನಿಷೇಧ ವಿಧಿಸಿತ್ತು. ನಂತರ ಅವರ ಬ್ಯಾನ್‍ನನ್ನು ಏಳು ವರ್ಷಕ್ಕೆ ಇಳಿಸಲಾಗಿತ್ತು. ಇಂದು ಅವರ ಮೇಲಿನ ನಿರ್ಬಂಧ ತೆರವುಗೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಶ್ರೀಶಾಂತ್, ನಾನು ಸ್ಥಳೀಯ ಮತ್ತು ದೇಶೀಯ ಕ್ರಿಕೆಟ್‍ನಲ್ಲಿ ಮತ್ತೆ ಆಡಲು ಬಯಸಿದ್ದೇನೆ. ನನಗೆ ಅವಕಾಶ ಲಭಿಸಿದರೆ, ನಾನು ಬೌಲಿಂಗ್‍ನಲ್ಲಿ ಎಸೆಯುವ ಪ್ರತಿಯೊಂದು ಚೆಂಡು ಅತ್ಯಂತ ಪರಿಣಾಮಕಾರಿಯಾಗಿರುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಾನು ಇನ್ನೂ ಐದರಿಂದ ಏಳು ವರ್ಷ ಕ್ರಿಕೆಟ್ ಆಡುವ ಹುಮ್ಮಸ್ಸು ಹೊಂದಿದ್ದೇನೆ. ನನಗೆ ಅವಕಾಶ ದೊರೆತೆರೆ ನನ್ನ ಸಾಮಥ್ರ್ಯವನ್ನು ಸಾಬೀತು ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.  ಶ್ರೀಶಾಂತ್ ತಮ್ಮ ಫಿಟ್ನೆಸ್ ಸಾಬೀತು ಮಾಡಿದರೆ ಅವರಿಗೆ ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಾಗಿ ಕೇರಳ ಸರ್ಕಾರ ಈಗಾಗಲೇ ತಿಳಿಸಿದೆ.

Facebook Comments