ಕ್ರಿಕೆಟ್ ಲೋಕದಲ್ಲಿ ಮತ್ತೆ ಶ್ರೀಶಾಂತ್ ಮಿಂಚು

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರ, ಜೂ.18- ಸ್ಪಾಟ್ ಫಿಕ್ಸಿಂಗ್‍ನಿಂದ 7 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದ ವೇಗಿ ಶ್ರೀಶಾಂತ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿದ್ದಾರೆ. 2013ರ ಐಪಿಎಲ್‍ನಲ್ಲಿ ರಾಜಾಸ್ಥಾನ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾಂತ್, ಅಜಿತ್ ಚಂಡೇಲಾ ಹಾಗೂ ಅಂಕಿತ್‍ಚೌಹಾಣ್‍ರೊಂದಿಗೆ ಸ್ಪಾಟ್ ಫಿಕ್ಸಿಂಗ್ ಸುಳಿಗೆ ಸಿಲುಕಿ ಅಜೀವ ಶಿಕ್ಷೆಗೆ ಒಳಗಾಗಿದ್ದರು.

ಈ ಪ್ರಕರಣದ ಸಂಬಂಧ ನಿರಂತರ ಮೊಕದ್ದಮೆ ಎದುರಿಸಿದ ಶ್ರೀಶಾಂತ್‍ಗೆ 2019ರಲ್ಲಿ ಸುಪ್ರೀಂಕೋರ್ಟ್ ಅಜೀವ ನಿಷೇಧದ ಬದಲು ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಬಿಸಿಸಿಐ ಶ್ರೀಶಾಂತ್‍ಗೆ 7 ವರ್ಷಗಳ ನಿಷೇಧ ಏರಿತ್ತು.

ನಿಷೇಧದ ಅವಧಿ ಇದೇ ಸೆಪ್ಟೆಂಬರ್‍ಗೆ ಮುಕ್ತಾಯವಾಗುವುದರಿಂದ ಮುಂಬರುವ ರಣಜಿ ಸರಣಿಯಲ್ಲಿ ಶ್ರೀಶಾಂತ್‍ಗೆ ಸ್ಥಾನ ಕಲ್ಪಿಸಲು ಕೇರಳ ಕ್ರಿಕೆಟ್ ಅಸೋಸಿಯೇಷನ್ ತೀರ್ಮಾನಿಸಿದೆ.

ನನಗೆ ಮತ್ತೆ ಕ್ರಿಕೆಟ್ ಲೋಕದಲ್ಲಿ ಛಾನ್ಸ್ ಸಿಕ್ಕಿರುವುದಕ್ಕೆ ಸಂತಸವಾಗುತ್ತಿದೆ, ಕೇರಳ ತಂಡವು ನನಗೆ ಅವಕಾಶ ಕಲ್ಪಿಸಿದ್ದು ನನ್ನ ಹಿಂದಿನ ತಪ್ಪುಗಳನ್ನೆಲ್ಲಾ ಅರಿತುಕೊಂಡಿದ್ದು ಇನ್ನು ಮುಂದೆ ತಂಡದ ಗೆಲುವಿಗಾಗಿ ನನ್ನ ಶಕ್ತಿ ವಿನಿಯೋಗಿಸಿ ರಾಷ್ಟ್ರೀಯ ತಂಡಕ್ಕೂ ಮರಳುತ್ತೇನೆ ಎಂದು ಸುದ್ದಿಗಾರರಿಗೆ ಶ್ರೀಶಾಂತ್ ತಿಳಿಸಿದ್ದಾರೆ.

ಕೇರಳ ಕ್ರಿಕೆಟ್ ಸಮಿತಿಯು ಇತ್ತೀಚೆಗೆ ವೇಗದ ಬೌಲರ್ ಟೀನು ಯೊಹಾನಾರನ್ನು ಬೌಲಿಂಗ್ ಕೋಚ್ ಆಗಿ ಮಾಡಿಕೊಂಡಿದ್ದು, ಈಗ ಶ್ರೀಶಾಂತ್ ಕೂಡ ತಂಡವನ್ನು ಕೂಡಿಕೊಳ್ಳುವುದರಿಂದ ತಂಡದ ಸದೃಢವಾಗಿದೆ ಎಂದು ಕೆಸಿಎ ಕಾರ್ಯದರ್ಶಿ ಶ್ರೀತ್ ನಾಯರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

2007ರ ಚುಟುಕು ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್‍ನಲ್ಲಿ ಭಾರತ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಿಂದ 87 ವಿಕೆಟ್, 53 ಏಕದಿನ ಪಂದ್ಯಗಳಿಂದ 75 ವಿಕೆಟ್, ಟ್ವೆಂಟಿ-20 ಮಾದರಿಯ ಕ್ರಿಕೆಟ್‍ನಲ್ಲಿ 10 ಪಂದ್ಯಗಳಿಂದ 7 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

44 ಐಪಿಎಲ್ ಪಂದ್ಯಗಳನ್ನಾಡಿರುವ ಶ್ರೀಶಾಂತ್ 40 ವಿಕೆಟ್‍ಗಳನ್ನು ಕೆಡವಿದ್ದಾರೆ.  ಬಣ್ಣದ ಲೋಕದಲ್ಲೂ ಮಿಂಚಿದ್ದ ಶ್ರೀಶಾಂತ್ ಕನ್ನಡದ ಕೆಂಪೇಗೌಡ 2 ಚಿತ್ರ ಸೇರಿದಂತೆ ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವುದಲ್ಲದೆ ತಿರುವನಂತಪುರ ಕೇಂದ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‍ನ ವಿ.ಎಸ್.ಶಂಕರ್ ವಿರುದ್ಧ ಪರಾಭವಗೊಂಡಿದ್ದರು.

Facebook Comments