ಅಗಲಿದ ನಾಯಕರಿಗೆ ಗಣ್ಯರಿಂದ ಕಂಬನಿ, ಮುಗಿಲು ಮುಟ್ಟಿದ ಆಕ್ರಂದನ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ/ಬೆಂಗಳೂರು, ಏ.24- ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ಜೆಡಿಎಸ್ ಮುಖಂಡರಾದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಗೋವೇನಹಳ್ಳಿ ಶಿವಣ್ಣ, ಎಂ. ರಂಗಪ್ಪ ಮತ್ತು ನಾಗರಾಜರೆಡ್ಡಿ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತರಲಾಯಿತು.

ನಂತರ ಆ್ಯಂಬುಲೆನ್ಸ್‍ಗಳ ಮೂಲಕ ಅವರವರ ನಿವಾಸಗಳಿಗೆ ಕೊಂಡೊಯ್ದಾಗ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು, ಸಂಬಂಧಿಕರು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮನಕಲಕುವಂತಿತ್ತು.

ಖುಷಿಯಿಂದ ಪ್ರವಾಸಕ್ಕೆ ಹೊರಟವರು ಶವವಾಗಿ ಮನೆಗೆ ಹಿಂತಿರುಗಿದ್ದಾರೆ ಎಂದು ಕಣ್ಣೀರು ಹರಿಸಿದ ಕುಟುಂಬ ಸದಸ್ಯರು ವಿಧಿಯಾಟಕ್ಕೆ ಮಮ್ಮಲಮರುಗಿದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಮೃತರ ಮನೆಗಳಲ್ಲಿ ಶೋಕದ ವಾತಾವರಣ ಮಡುಗಟ್ಟಿತ್ತು.

ಹನುಮಂತರಾಯಪ್ಪ ಅವರ ಪಾರ್ಥಿವ ಶರೀರವನ್ನು ದಾಸರಹಳ್ಳಿಯ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವಣ್ಣ ಹಾಗೂ ಲಕ್ಷ್ಮೀನಾರಾಯಣ ಅವರ ಕಳೇಬರವನ್ನು ಅವರ ನಿವಾಸದ ಬಳಿ ಕೆಲಹೊತ್ತು ಇರಿಸಿ ನಂತರ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ಇನ್ನು ನಾಗರಾಜರೆಡ್ಡಿ ಅವರ ಬಿಟಿಎಂ ಲೇಔಟ್ ನಿವಾಸದಲ್ಲೂ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ಸ್ನೇಹಿತರಿಗೆ ಅಶ್ರುತರ್ಪಣ ಸಲ್ಲಿಸಿದರು.

ಮಾಜಿ ಸಚಿವ ಶಾಸಕ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಅವರೊಂದಿಗಿನ ಒಡನಾಟವನ್ನು ನೆನೆದು ಕಂಬನಿ ಮಿಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕ ಆರ್.ಮಂಜುನಾಥ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಟಿ.ದಾಸರಹಳ್ಳಿಯ ಚೊಕ್ಕಸಂದ್ರದ ರಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮೃತರಂಗಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ರಂಗಪ್ಪ ಅವರ ಕುಟುಂಬ ಸದಸ್ಯರಿಗೆ ನಿಮ್ಮೊಂದಿಗೆ ನಾವಿದ್ದೇವೆ. ಭಯ ಪಡಬೇಡಿ ಎಂದು ಮುಖ್ಯಮಂತ್ರಿ ಧೈರ್ಯ ತುಂಬಿದರು. ನಂತರ ಗೌಡರು ಮತ್ತು ಕುಮಾರಸ್ವಾಮಿ ಅವರು ದಾಸರಹಳ್ಳಿಯ ಹನುಮಂತರಾಯಪ್ಪ ಅವರ ನಿವಾಸಕ್ಕೆ ತೆರಳಿ ಮೃತ ಹನುಮಂತರಾಯಪ್ಪ ಅವರ ಪಾರ್ಥಿವ ಶರೀರದ ದರ್ಶನ ಪಡೆದು , ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ನೆಲಮಂಗಲದಲ್ಲಿ ಗೋವೇನಹಳ್ಳಿ ಶಿವಣ್ಣ ಹಾಗೂ ಲಕ್ಷ್ಮೀನಾರಾಯಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿರು.ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಾ.ಕೆ.ಶ್ರೀನಿವಾಸ್‍ಮೂರ್ತಿ ಕೂಡ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಇದಕ್ಕೂ ಮುನ್ನ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಚ್ಚೇಗೌಡ, ಮೇಲನಗವಿ ಮಠದ ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮುಖಂಡರು ನೆಲಮಂಗಲ ಹಾಗೂ ದಾಸರಹಳ್ಳಿಯ ನಿವಾಸಗಳಿಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇಂದು ಸಂಜೆ ಲಕ್ಷ್ಮಿನಾರಾಯಣ ಅವರ ಅಂತ್ಯಕ್ರಿಯೆ ಕಾಚಕನಹಳ್ಳಿಯಲ್ಲಿ, ಶಿವಣ್ಣ ಅವರ ಅಂತ್ಯಕ್ರಿಯೆ ಗೋವೇನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹನುಮಂತರಾಯಪ್ಪ ಮತ್ತು ರಂಗಪ್ಪ ಅವರ ಮೃತದೇಹಳ ಅಂತ್ಯಕ್ರಿಯೆ ಸಂಜೆ ವೇಳೆಗೆ ನೆರವೇರಿಸಲಾಗುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶ್ರೀಲಂಕಾದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಮಾರೇಗೌಡ, ಪುಟ್ಟರಾಜು, ತುಮಕೂರು ರಮೇಶ್ ಅವರ ಪಾರ್ಥಿವ ಶರೀರಗಳು ಇಂದು ಸಂಜೆ ವೇಳೆಗೆ ಬೆಂಗಳೂರು ಬರುವ ನಿರೀಕ್ಷೆ ಇದೆ.

Facebook Comments