ಶ್ರೀಲಂಕಾದ ಬಾಂಬ್‍ಸ್ಫೋಟ: ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ. ನೀಡಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.25- ಶ್ರೀಲಂಕಾದ ಬಾಂಬ್‍ಸ್ಫೋಟದಲ್ಲಿ ಮೃತಪಟ್ಟಿರುವ ಕರ್ನಾಟಕದ 9 ಮಂದಿ ಕುಟುಂಬದ ಸದಸ್ಯರಿಗೆ ತಕ್ಷಣವೇ ಸಿಎಂ ಪರಿಹಾರ ನಿಧಿಯಿಂದ ತಲಾ 50 ಲಕ್ಷ ರೂ. ಬಿಡುಗಡೆ ಮಾಡಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಬ್‍ಸ್ಫೋಟದಲ್ಲಿ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

500ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಮಾರಣಹೋಮ ನಡೆಸಿರುವ ಉಗ್ರಗಾಮಿಗಳನ್ನು ಸದೆಬಡಿಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ತಪ್ಪು ಮಾಡದ ಅಮಾಯಕ ಜೀವಗಳು ಬಲಿಯಾಗಿವೆ. ಅವರ ಕುಟುಂಬಗಳು ತಮ್ಮ ಮನೆ ಯಜಮಾನನ್ನು ಕಳೆದುಕೊಂಡು ನೋವು ಅನುಭವಿಸುವಂತಾಗಿದೆ. ಈ ಘಟನೆಯನ್ನು ಅವಲೋಕಿಸಿದರೆ ಮಾನವ ಕುಲ ಎತ್ತ ಸಾಗುತ್ತಿದೆ ಎಂದು ಚಿಂತಿಸುವಂತಾಗಿದೆ ಎಂದರು.

ಇದೇ ರೀತಿ ಮುಂದುವರಿದರೆ ಮಾನವ ಕುಲ ಸರ್ವನಾಶವಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ವಿಶ್ವಸಂಸ್ಥೆಯಿಂದ ಹಿಡಿದು ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕು. ಅದೇ ರೀತಿ ಉಗ್ರಗಾಮಿಗಳನ್ನು ದಮನ ಮಾಡಬೇಕೆಂದು ಆಗ್ರಹಿಸಿದರು.

ಹಲವು ಉಗ್ರಗಾಮಿ ಸಂಘಟನೆಗಳ ಕಣ್ಣು ಬೆಂಗಳೂರಿನತ್ತ ನೆಟ್ಟಿದೆ. ಈ ಬಗ್ಗೆ ಕರ್ನಾಟಕದ ಪೊಲೀಸರು ಸೇರಿದಂತೆ ಗುಪ್ತಚರ ಇಲಾಖೆ, ಪೆÇಲೀಸ್ ಇಲಾಖೆಗಳು ಸರ್ವಸನ್ನದ್ಧರಾಗಿ ಬೇರು ಸಮೇತ ಉಗ್ರಗಾಮಿ ಸಂಘಟನೆಯನ್ನು ಮಟ್ಟ ಹಾಕಬೇಕೆಂದು ಆಗ್ರಹಿಸಿದರು.

ಹೊರಗಿನಿಂದ ಬಂದು ಹೊಟೇಲ್‍ಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸವಿರುವ ಅನಾಮಧೇಯ ವ್ಯಕ್ತಿಗಳ ಚಲನವಲನಗಳ ಬಗ್ಗೆ ನೆರೆಹೊರೆಯವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಮೂಲಕ ಮುಂದಾಗುವ ಅನಾಹುತ ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಂದೀಶ್, ಬನಶಂಕರಿ ಬಾಬು, ಜಯಸಿಂಹ, ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments