ಪತ್ರಕರ್ತನ ಮೇಲೆ ಲಂಕಾ ಯೋಧರಿಂದ ಕ್ರೂರ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೋ, ನ.30- ಸರ್ಕಾರಿ ಪಡೆಗಳೊಂದಿಗೆ 2009ರಲ್ಲಿ ನಡೆದ ಎಲ್‍ಟಿಟಿಇಯ ಅಂತಿಮ ಕದನದಲ್ಲಿ ಮಡಿದವರ ಸಂಸ್ಮರಣ ಕಾರ್ಯಕ್ರಮದ ವರದಿ ಮಾಡಲು ಈ ವಾರ ತೆರಳಿದ್ದ ತಮಿಳು ಪತ್ರಕರ್ತರೊಬ್ಬರ ಮೇಲೆ ಶ್ರೀಲಂಕಾ ಯೋಧರ ಒಂದು ಗುಂಪು ಕ್ರೂರವಾಗಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಮಾಧ್ಯಮ ಸಚಿವ ಡಲ್ಲಾಸ್ ಅಲೂಹಾಪೆರುಮಾ ಅವರಿಗೆ ಕಳುಹಿಸಿರುವ ಇ-ಮೇಲ್‍ನಲ್ಲಿ ಫೆಡರೇಷನ್ ಆಫ್ ಮೀಡಿಯಾ ಎಂಪ್ಲಾಯಿಸ್ ಟ್ರೇಡ್ ಯೂನಿಯನ್ಸ್ ನ.28ರಂದು ಮಾಧ್ಯಮ ವರದಿಗಾರಿಕೆಯಲ್ಲಿ ನಿರತರಾಗಿದ್ದ ಪತ್ರಕರ್ತ ವಿಶ್ವಲಿಂಗಂ ವಿಶ್ವಚಂದ್ರನ್ ಅವರ ಮೇಲೆ ಕಾರ್ಯಕ್ರಮ ಸ್ಥಳದಲ್ಲಿ ಉಪಸ್ಥಿತರಿದ್ದ ಶ್ರೀಲಂಕಾ ಯೋಧರ ಒಂದು ಗುಂಪು ಬರ್ಬರ ಹಲ್ಲೆ ನಡೆಸಿದೆ ಎಂದು ದೂರಿದೆ.

ಮುಲ್ಲತೀವುವಿನಲ್ಲಿ ಮಲ್ಲಿವೈಕ್ಕಳ್ ನಾಮಫಲಕದ ಛಾಯಾಚಿತ್ರ ತೆಗೆಯುತ್ತಿದ್ದಾಗ ತಂತಿಯನ್ನು ಸುತ್ತಿದ್ದ ತಾಳೆ ಮರದ ಕೋಲಿನಿಂದ ಯೋಧರು ವಿಶ್ವಲಿಂಗಂ ಅವರನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ಎಫ್‍ಎಂಇಟಿಯು ದೂಷಿಸಿದೆ. ಘಟನೆ ಸಂಬಂಧ ಮುಲ್ಲತೀವು ಪೊಲೀಸರು ಮೂವರು ಯೋಧರನ್ನು ಬಂಸಿದ್ದಾರೆ ಎಂದು ವರದಿಯಾಗಿದೆ.

Facebook Comments