ಹ್ಯಾಕರ್ ಶ್ರೀಕಿ ವಶದಲ್ಲಿದ್ದ 9 ಕೋಟಿ ಮೌಲ್ಯದ 31 ಬಿಟ್‍ಕಾಯಿನ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15- ಡ್ರಗ್ಸ್ ಪೆಡ್ಲಿಂಗ್ ಪ್ರಕರಣದಲ್ಲಿ ಸಿಸಿಬಿ ಪೋಲೀಸರು ಬಂಧಿಸಿರುವ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಐಷಾರಾಮಿ ಜೀವನ ನಡೆಸಲು ಬಿಟ್‍ಕಾಯಿನ್ ಖಾತೆ ಹ್ಯಾಕ್ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದ್ದು, 9 ಕೋಟಿ ರೂ. ಮೌಲ್ಯದ 31 ಬಿಟ್‍ಕಾಯಿನ್ ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳನ್ನು ಅಲ್ಲದೆ ಬೇರೆ ಬೇರೆ ದೇಶದ ವಿವಿಧ ಪೋಕರ್ ಗೇಮ್ ವೆಬ್‍ಸೈಟ್‍ಗಳನ್ನು ಮತ್ತು ಕ್ರಿಪೋ ಕರೆನ್ಸಿಗಳಾದ ಬಿಟ್‍ಕಾಯಿನ್, ವೈಎಫ್‍ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ.

ವೆಬ್‍ಸೈಟ್ ಹ್ಯಾಕಿಂಗ್: ಆರೋಪಿಯು ತನ್ನ ಸಹಚರರಾದ ಸುನೀಷ್‍ಶೆಟ್ಟಿ, ಪ್ರಸಿದ್‍ಶೆಟ್ಟಿ, ಸುಜಯ್, ಹೇಮಂತ್ ಮುದ್ದಪ್ಪ, ರಾಬಿನ್ ಖಂಡೇಲ್‍ವಾಲ್ ಹಾಗೂ ಇತರರೊಂದಿಗೆ ಸೇರಿಕೊಂಡು ಲಾಭ ಪಡೆಯುವ ಉದ್ದೇಶದಿಂದ ದೇಶದ ಹಾಗೂ ಬೇರೆ ಬೇರೆ ದೇಶಗಳ ಪೋಕರ್ ಗೇಮಿಂಗ್ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ, ಡೇಟಾವನ್ನು ಕಳವು ಮಾಡಿ ಆ ಡೇಟಾವನ್ನು ತಮ್ಮ ಗೇಮಿಂಗ್ ವೆಬ್‍ಸೈಟ್‍ಗೆ ಉಪಯೋಗಿಸಿಕೊಳ್ಳುತ್ತಿದ್ದರು.

ಇದುವರೆಗೂ 3 ಬಿಟ್‍ಕಾಯಿನ್ ಎಕ್ಸ್‍ಚೇಂಜ್ ಹ್ಯಾಕ್ಡ್, 10 ಪೋಕರ್ ವೆಬ್‍ಸೈಟ್, 4 ವೆಬ್‍ಸೈಟ್ ಮತ್ತು 3 ಮಾಲ್‍ವೇರ್ ಎಕ್ಸ್‍ಪೋಟೆಡ್ ಹ್ಯಾಕ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ತನಿಖಾ ಪ್ರಗತಿಯ ಮಾಹಿತಿಯನ್ನು ಇಂಟರ್‍ಪೆಪೋಲ್ ಮುಖಾಂತರ ಸಂಬಂಧಿಸಿದ ಕಂಪೆನಿಗಳಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಆರೋಪಿ ಶ್ರೀಕಿ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ, ರೆಸಾರ್ಟ್‍ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದನು. ಬಿಟ್‍ಕಾಯಿನ್ ಖಾತೆಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಬಿಟ್‍ಕಾಯಿನ್‍ಗಳನ್ನು ಕಳವು ಮಾಡಿ, ಬಿಟ್‍ಕಾಯಿನ್ ಟ್ರೇಡರ್ ರಾಬಿನ್ ಖಂಡೇಲ್‍ವಾಲ್ ಸೇರಿದಂತೆ ಇತರೆ ಬಿಟ್‍ಕಾಯಿನ್ ಟ್ರೇಡರ್‍ಗಳಿಗೆ ನೀಡುತ್ತಿದ್ದನು.

ನಂತರ ಟ್ರೇಡರ್‍ಗಳಿಂದ ತನ್ನ ಸಹಚರರ ಬ್ಯಾಂಕ್ ಖಾತೆಗೆ ಹಾಗೂ ಹವಾಲ ಮುಖಾಂತರ ಹಣವನ್ನ ಸಂಗ್ರಹಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದುದು ತೀವ್ರ ವಿಚಾರಣೆಯಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಡಾರ್ಕ್ ವೆಬ್ ಸೈಟ್‍ಗಳನ್ನು ಉಪಯೋಗಿಸಿ ಬೇರೆ ಬೇರೆ ದೇಶಗಳಿಂದ ಡ್ರಗ್ಸ್‍ಗಳನ್ನು ಖರೀದಿಸಲು ಕದ್ದಿರುವ ಬಿಟ್‍ಕಾಯಿನ್‍ಗಳನ್ನು ಉಪಯೋಗಿಸುತ್ತಿದ್ದರು.

ಹ್ಯಾಕಿಂಗ್ ಟೂಲ್: ಬಿಟ್‍ಕಾಯಿನ್ ಖಾತೆ ಹ್ಯಾಂಕಿಂಗ್‍ಗಾಗಿ ಬಿಟ್‍ಕಾಯಿನ್ ಖಾತೆಗಳ ಮಾಹಿತಿ ಪಡೆಯಲು ಪ್ರೈವೇಟ್ ವೆಬ್‍ಸೈಟ್‍ಗಳನ್ನು ಆರೋಪಿ ಉಪಯೋಗಿಸಿಕೊಂಡಿರುತ್ತಾನೆ.
2019ನೇ ಸಾಲಿನಲ್ಲಿ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‍ಮೆಂಟ್ ಸೈಟ್‍ನ್ನು ಹ್ಯಾಕ್ ಮಾಡಿ ಕೋಟ್ಯಂತರ ಹಣವನ್ನು ತನ್ನ ಸಹಚರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಇದುವರೆಗೆ ಈತನಿಂದ ಅಕ್ರಮವಾಗಿ ಹ್ಯಾಕ್ ಮಾಡಿ ಸಂಪಾದಿಸಿದ್ದ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ತನಿಖೆಯನ್ನು ಜಂಟಿ ಪೋಲೀಸ್ ಆಯುಕ್ತರು (ಅಪರಾಧ) ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಬಿ.ಎಸ್.ಅಂಗಡಿ ಮಾರ್ಗದರ್ಶನದಲ್ಲಿ ಸಿಸಿಬಿ ಪೋಲೀಸ್ ಇನ್ಸ್‍ಪೆಕ್ಟರ್ ಶ್ರೀಧರ ಪೂಜಾರ, ಲಕ್ಷ್ಮೀಕಾಂತ, ಚಂದ್ರಧರ, ಪ್ರಶಾಂತಬಾಬು ಹಾಗೂ ಅವರ ತಂಡ ಕೈಗೊಂಡಿರುತ್ತಾರೆ.

Facebook Comments