ಇಂಥ ದುರಂತ ಎಲ್ಲೂ ಸಂಭವಿಸಬಾರದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.24- ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ದುರ್ಘಟನೆ ವಿಶ್ವದ ಯಾವುದೇ ರಾಷ್ಟ್ರದಲ್ಲೂ ನಡೆಯಬಾರದು. ಇಂಥ ದುರಂತ ಸಾವು ಶತ್ರುಗಳಿಗೂ ಬರಬಾರದು ಎಂದು ವಿಧಾನಪರಿಷತ್‍ನ ಮಾಜಿ ಸದಸ್ಯ ಇ.ಕೃಷ್ಣಪ್ಪ ವಿಷಾಧಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಯಾವುದೇ ರಾಷ್ಟ್ರದಲ್ಲೂ ಬಾಂಬ್ ಸ್ಫೋಟದಂತಹ ದುರಂತದ ಘಟನೆ ಮನುಕುಲಕ್ಕೆ ಒಳ್ಳೆಯದಲ್ಲ. ಇದು ಮಾನವ ಕುಲಕ್ಕೆ ಮಾರಕವಾದ ಘಟನೆಯಾಗಿದೆ. ರಾಜ್ಯದಿಂದ ಜೆಡಿಎಸ್‍ನ ಏಳುಮಂದಿ ಮುಖಂಡರು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಆದರೆ ಇಂತಹ ದುರಂತ ಸಂಭವಿಸುತ್ತದೆ ಎಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.

ದುರಂತ ಸಾವನ್ನಪ್ಪಿರುವ ಸುದ್ದಿ ಕೇಳಿ ತಮಗೆ ತೀವ್ರ ಆಘಾತ ಉಂಟಾಯಿತು. ಇದೊಂದು ಆಕಸ್ಮಿಕ ಘಟನೆಯಾದರೂ ಅದರಿಂದ ಉಂಟಾದ ನೋವಿಗೆ ಬೆಲೆ ಕಟ್ಟಲು ಆಗುವುದಿಲ್ಲ. ತಾವು ದುರಂತ ನಡೆದ ನಂತರ ಶ್ರೀಲಂಕಾಕ್ಕೆ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿ ತುಂಬ ಕಠಿಣವಾಗಿದೆ. ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಕೆಲವು ಕಡೆ ಜನರು ತೀವ್ರ ಭಯಭೀತರಾಗಿದ್ದಾರೆ. ಕೆಲವು ಕಡೆ ಸಹಜ ಸ್ಥಿತಿ ಇದ್ದರೂ ಆತಂಕ ಮಾತ್ರ ದೂರವಾಗಿಲ್ಲ. ನಮ್ಮಲ್ಲಿರುವಂತೆ ಶ್ರೀಲಂಕಾದಲ್ಲಿ ಹೆಚ್ಚಿನ ಬಿಗಿಭದ್ರತೆ ಇಲ್ಲ. ಇನ್ನು ಮುಂದಾದರೂ ಭದ್ರತಾ ವ್ಯವಸ್ಥೆಯನ್ನು ಸರಿಪಡಿಸಬಹುದೇನೋ ಎಂದರು.

ನಿನ್ನೆ ಶ್ರೀಲಂಕಾದ ಕೊಲಂಬೋದಲ್ಲಿ ಮೃತಪಟ್ಟಿದ್ದ ಏಳು ಮಂದಿಯ ಪಾರ್ಥಿವ ಶರೀರವನ್ನು ತರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸೂಕ್ತ ಸಹಕಾರ ನೀಡಿತು. ಇದರಿಂದಾಗಿ ನಮಗೆ ಹೆಚ್ಚಿನ ತೊಂದರೆ ಉಂಟಾಗಲಿಲ್ಲ ಎಂದರು.

ಆ ದೇಶದ ನಿಯಮಾನುಸಾರ ಮರಣೋತ್ತರದ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹಗಳನ್ನು ನೀಡಲಾಯಿತು. ಇಂದು ಬೆಳಗ್ಗೆ ದುರಂತದಲ್ಲಿ ಸಾವನ್ನಪ್ಪಿದ ಹನುಮಂತರಾಯಪ್ಪ , ಗೋವೆನಹಳ್ಳಿ ಶಿವಣ್ಣ, ಲಕ್ಷ್ಮಿನಾರಾಯಣ, ರಂಗಪ್ಪ ಅವರ ಮೃತದೇಹಗಳನ್ನು ತರಲಾಯಿತು.

ಕುಟುಂಬಸ್ಥರು, ಬಂಧುಗಳು, ಹಿತೈಷಿಗಳ ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶ್ರೀಲಂಕಾದ ಬಾಂಬ್ ಸ್ಫೋಟದಲ್ಲಿ ದುರಂತ ಸಾವನ್ನಪ್ಪಿದ ಪುಟ್ಟರಾಜು, ಮಾರೇಗೌಡ ಹಾಗೂ ತುಮಕೂರಿನ ರಮೇಶ್ ಗೌಡ ಅವರ ಪಾರ್ಥಿವ ಶರೀರಗಳು ಇಂದು ಮಧ್ಯಾಹ್ನ ಬರಲಿವೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ