ಶ್ರೀಮಂತ ಪಾಟೀಲರ ಮರಾಠಿ ಪ್ರೇಮಕ್ಕೆ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಆ.4- ರಾಜ್ಯದ ಸಚಿವರು ರಾಜ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿ ಮರಾಠಿಯಲ್ಲಿ ಮಾತನಾಡಿರುವುದು ಖಂಡನೀಯ. ಅವರನ್ನು ಕೂಡಲೇ ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಿಂಹ ಗರ್ಜನೆ ವೇದಿಕೆ ಸದಸ್ಯರು ಬೆಮಲ್ ನಗರದಲ್ಲಿ ಸಚಿವರ ಶವ ಸಂಸ್ಕಾರದ ಅಣಕು ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಪ್ರಸನ್ನ ಕುಮಾರ ಸ್ವಾಮಿ, ನೆಲದಲ್ಲಿ ಅಧಿಕಾರ ಅನುಭವಿಸುತ್ತಿರುವ ಶ್ರೀಮಂತ ಪಾಟೀಲ ಸಚಿವರಾಗಿದ್ದರೂ ಅವರು ಕನ್ನಡಿಗರ ಪಾಲಿಗೆ ಬಡವರಾಗಿದ್ದಾರೆ.

ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಮಹಾರಾಷ್ಟ್ರದ ನಾಯಕರನ್ನು ಖುಷಿಪಡಿಸಲು ಸಕ್ಕರೆ ಕಾರ್ಖಾನೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಮಾತನಾಡಿದ್ದಾರೆ. ಇಡೀ ಕಾರ್ಯಕ್ರಮವನ್ನು ಮರಾಠಿಮಯ ಮಾಡಿದ್ದಾರೆ. ಇಂತಹ ಸಚಿವರನ್ನು ಕೂಡಲೇ ಮಂತ್ರಿ ಮಂಡಲದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಕ್ಕೆ ಎಲ್ಲಾ ರೀತಿಯ ಮಾನ್ಯತೆ ಮತ್ತು ಅಧಿಕಾರ ಇಲ್ಲಿದೆ. ಅದನ್ನು ಮರೆತು ಮರಾಠಿ ಪ್ರೇಮ ತೋರ್ಪಡಿಸುತ್ತಿರುವ ಸಚಿವ ಶ್ರೀಮಂತ ಪಾಟೀಲ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಕನ್ನಡ ಜಾಗೃತಿ ವೇದಿಕೆಯ ರಮೇಶ್ ಗೌಡ ಆರೋಪಿಸಿದರು.

ಯುಗಂಧರ್, ರಾಜೇಶ್ ಗೌಡ, ಸುದೀಪ್ ಗೌಡ, ಸುರೇಶ್ ನಾಯಕ್ ಮತ್ತಿತರರು ಇದ್ದರು.

Facebook Comments

Sri Raghav

Admin