ಡಿಕೆಶಿ ಬಂಧನದಲ್ಲಿ ಬಿಜೆಪಿ ಹಸ್ತಕ್ಷೇಪವಿಲ್ಲ : ಸಚಿವ ಕೋಟಾ ಶ್ರೀನಿವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ, ಸೆ.19- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದಲ್ಲಿ ಬಿಜೆಪಿಯ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು, ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಚೆಂಬಳಕಿನ ಕವಿ ನಾಡೋಜ ಚನ್ನವೀರ ಕಣವಿ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ರಾಷ್ಟ್ರ ಒಂದೇ ಸಂವಿಧಾನ ಎಂಬ ಅಭಿಯಾನದಡಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಹೇಳಿದರು.

ಡಿಕೆಶಿ ವಿಚಾರದಲ್ಲಿ ಇಡಿ ತನ್ನದೆ ಆದ ಕಾರ್ಯನಿರ್ವಹಿಸುತ್ತಿದೆ. ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅನರ್ಹ ಶಾಸಕರ ರಾಜೀನಾಮೆ ಅಂಗೀಕಾರವಾದ ಆರು ತಿಂಗಳಲ್ಲಿ ಚುನಾವಣೆ ನಡೆಸಲಾಗುತ್ತದೆ. ಉಪಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಬಿಜಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.

ಹಿಂದಿ ಭಾಷೆ ಕುರಿತು ಗೊಂದಲದ ಅಗತ್ಯವಿಲ್ಲ. ಈಗಾಗಲೇ ಸಚಿವರಾದ ಅಮಿತ್ ಷಾ ಅವರೇ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದು ಭಾಷೆಯಾಗಿ ಹಿಂದಿ ಕಲಿಯಬೇಕು ಎಂದಿದ್ದಾರೆ. ಹೀಗಾಗಿ ಆ ಬಗ್ಗೆ ಗೊಂದಲ ಬೇಡ. ಕನ್ನಡಕ್ಕೆ ಪ್ರಥಮ ಆದ್ಯತೆ ಇರಲೇಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ಮೈಸೂರಿನಲ್ಲಿ ದೇವಸ್ಥಾನಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಅದನ್ನು ಕಡ್ಡಾಯ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಕೊಡುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಸದ್ಯಕ್ಕೆ ಸಚಿವ ಸಂಪುಟ ರಚನೆಯಾಗಿದೆ. ಕಾಲಕಾಲಕ್ಕೆ ಸಚಿವ ಸಂಪುಟ ವಿಸ್ತರಣೆಯಾದಾಗ ಬೇಡಿಕೆ ಈಡೇರಿಸುವ ಕೆಲಸವನ್ನು ಯಡಿಯೂರಪ್ಪನವರು ಮಾಡುತ್ತಾರೆ ಎಂದುಉತ್ತರಿಸಿದರು.

ಈ ವೇಳೆ ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ, ಮೋಹನ ರಾಮದುರ್ಗ, ಶಿವು ಹಿರೇಮಠ, ಅರವಿಂದ ಏಗನಗೌಡರ್ ಇನ್ನಿತರರು ಉಪಸ್ಥಿತರಿದ್ದರು.

Facebook Comments