ಕಾರು ಪಲ್ಟಿಯಾಗಿ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಪತ್ನಿ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಉರುಳಿಬಿದ್ದ ಪರಿಣಾಮ ಕೇಂದ್ರ ಸಚಿವ ಶ್ರೀ ಪಾದ್ ನಾಯಕ್ ಅವರ ಪತ್ನಿ ದುರ್ಮರಣ ಹೊಂದಿರುವ ಘಟನೆ ಸಂಜೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕೇಂದ್ರದ ಆಯುಷ್ ,ಯುನಾನಿ ಮತ್ತು ಹೋಮಿಯೋಪತಿ ಸಚಿವ ಶ್ರೀಪಾದ ನಾಯಕ್ ಅವರ ಪತ್ನಿ ವಿಜಯ ಹಾಗೂ ಸಚಿವರ ಆಪ್ತ ಸಹಾಯಕ ದೀಪಕ್ ರಾಮದಾದ ಅವರುಗಳು ಸಾವನ್ನಪ್ಪಿದ್ದು, ಅಪಘಾತದಲ್ಲಿ ಸಚಿವರು ಸೇರಿದಂತೆ ಮತ್ತಿತರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಶ್ರೀ ಪಾದ ನಾಯಕ್ ಹಾಗೂ ಇತರರನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ.ಖಾಸಗಿ ಕಾರ್ಯಕ್ರಮ ನಿಮಿತ್ತ ಇಂದು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ಶ್ರೀ ಪಾದ್ ನಾಯಕ್ ಹಾಗೂ ಕುಟುಂಬದವರು ಗೋಕರ್ಣಕ್ಕೆ ಸಂಜೆ ತೆರಳುತ್ತಿದ್ದರು.

ಸಚಿವರ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಬಳಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಉರುಳಿಬಿದ್ದಿತು.ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ಉರುಳಿಬಿದ್ದಿದ್ದರಿಂದ ಕಾರಿನಲ್ಲಿದ್ದ ಸಚಿವರ ಪತ್ನಿ ವಿಜಯ ಹಾಗೂ ಆಪ್ತ ಸಹಾಯಕ ದೀಪಕ್ ರಾಮ್ ದಾದ ತೀವ್ರವಾಗಿ ಗಾಯಗೊಂಡಿದ್ದರು.

ಕೂಡಲೇ ಎಲ್ಲರನ್ನು ಅಂಕೋಲಾ ಅಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ಆ ವೇಳೆಗಾಗಲೇ ಇಬ್ಬರೂ ಕೊನೆಯುಸಿರೆಳೆದಿದ್ದರು. ಪ್ರಾಣಾಪಾಯದಿಂದ ಸದ್ಯ ಶ್ರೀ ಪಾದನಾಯಕ್ ಹಾಗೂ ಇತರರು ಪಾರಾಗಿದ್ದು,ಪರಿಸ್ಥಿತಿ ಗಂಭೀರವಾಗಿ ಇದೆ ಎಂದು ತಿಳಿದು ಬಂದಿದೆ.

ಗೋವಾ ಉತ್ತರ ಲೋಕಸಭಾ ಕ್ಷೇತ್ರ ಪ್ರತನಿಧಿಸುತ್ತಿದ್ದ ಶ್ರೀ ಪಾದ್ ನಾಯಕ್ ಈ ಹಿಂದೆ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಘಟನೆ ಕುರಿತಂತೆ ಪ್ರಧಾನಿ ಕಾರ್ಯಾಲಯಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.

ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಅಗತ್ಯ ಕಂಡ ಬಂದರೆ,ಹೆಚ್ಚಿನ ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ಒದಗಿಸುಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

# ಸಿಎಂ ಸಂತಾಪ :
ಅಂಕೋಲಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಅವರ ಪತ್ನಿ ಶ್ರೀಮತಿ ವಿಜಯಾ ನಾಯಕ್ ಅವರ ನಿಧನ ಹೊಂದಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ.

ವಿಜಯಾ ನಾಯಕ್ ಅವರ ನಿಧನ ಅತ್ಯಂತ ದುರದೃಷ್ಟಕರ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಈ ಆಘಾತವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅಂತೆಯೇ ಅಪಘಾತದಲ್ಲಿ ಗಾಯಗೊಂಡಿರುವ ಸಚಿವ ನಾಯಕ್ ಅವರು ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದ್ದಾರೆ. ಸಚಿವರಿಗೆ ಎಲ್ಲ ಅಗತ್ಯ ನೆರವು ನೀಡುವ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin