‘ಸಿಎಂ ಕೊಟ್ಟ ಮಾತು ತಪ್ಪಲ್ಲ’ : ಸಂಪುಟ ಕಂಟಕಕ್ಕೆ ತುಪ್ಪ ಸುರಿದ ಶ್ರೀರಾಮುಲು

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ಜ.25- ಶ್ರೀರಾಮುಲು ಡಿಸಿಎಂ ಆಗಬೇಕು ಎಂಬುದು ಜನರ ಬೇಡಿಕೆ. ರಾಜ್ಯದ ಸಾಮಾನ್ಯ ಜನರ ಬೇಡಿಕೆಯನ್ನು ನಾನು ಅಲ್ಲಗಳೆಯಲು ಹೋಗುವುದಿಲ್ಲ ಎಂದು ಸಚಿವ ಶ್ರೀರಾಮುಲು ಇಂದಿಲ್ಲಿ ಹೇಳಿದರು. ಈ ಬಗ್ಗೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮನ ತೆಗೆದುಕೊಳ್ಳುತ್ತಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಅವರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಸೋತವರನ್ನು ಸಚಿವರನ್ನಾಗಿ ಮಾಡುವ ಬೇಡಿಕೆ ವಿಚಾರದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವ್ಹಿಲ್‍ಚೇರ್ ನೀಡದೆ ಅಮಾನವೀಯ ಘಟನೆ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇಂತಹ ಘಟನಗಳನ್ನು ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ನೋಡಿದ್ದೇವೆ.

ಆದರೆ, ಬಳ್ಳಾರಿಯಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ತಪ್ಪಿತಸ್ಥರು ಯಾರೇ ಇದ್ದರೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದಾಗ ಅಲ್ಲಿನ ಬೆಡ್‍ಗಳ ಕೊರತೆ ವಿಚಾರ ಗಮನಿಸಿದ್ದೇನೆ. ಬೆಡ್‍ಗಳನ್ನು ಹೆಚ್ಚಿಸಲಾಗುವುದು.

ಆಸ್ಪತ್ರೆಯನ್ನು ಉನ್ನತ್ತೀಕರಣ ಮಾಡಬೇಕೆಂಬ ಬೇಡಿಕೆ ಇದೆ. ಅದನ್ನು ಶೀಘ್ರವೇ ಮಾಡುತ್ತೇವೆ. ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗಬೇಕು. ಅದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ನಾನು ಕೈಗೊಳ್ಳುತ್ತೇನೆ ಎಂದು ಹೇಳಿದರು. ಗುತ್ತಿಗೆ ಆಧಾರಿದ ಡಿ ಗ್ರೂಪ್ ನೌಕರರು, ಇತರೆ ಗುತ್ತಿಗೆ ನೌಕರರನ್ನು ಯಾವುದೇ ಕಾರಣಕ್ಕೂ ಹುದ್ದೆಯಿಂದ ತೆಗೆಯುವುದಿಲ್ಲ. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೆಲ್ತ್‍ಇನ್ಸ್‍ಪೆಕ್ಟರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲು ಮನವಿ ಮಾಡಿದ್ದಾರೆ. ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

Facebook Comments