ಕೊನೆಗೂ ಮಣಿದ ಸರ್ಕಾರ, ಗುತ್ತಿಗೆ ವೈದ್ಯರ ಸೇವೆಯನ್ನು ಖಾಯಂ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಕಳೆದ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 600 ವೈದ್ಯರ ಸೇವೆಯನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.  ತಮ್ಮ ಸೇವೆಯನ್ನು ಖಾಯಂಗೊಳಿಸದಿದ್ದರೆ ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಪ್ರಾರಂಭಿಸುವುದಾಗಿ ಗುತ್ತಿಗೆ ವೈದ್ಯರುಎಚ್ಚರಿಕೆ ನೀಡಿದ ಬೆನ್ನಲ್ಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 600 ವೈದ್ಯರ ಸೇವೆಯನ್ನು ಖಾಯಂಗೊಳಿಸಲು ಸೂಚನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರ ನಡೆಸಬಾರದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮನವಿ ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರ ಬೇಡಿಕೆಯಂತೆ ಅವರ ಸೇವೆಯನ್ನು ಖಾಯಂ ಮಾಡಲಿದ್ದೇವೆ. ಸುಮಾರು 600 ವೈದ್ಯರು ಸರ್ಕಾರ ನೀಡುತ್ತಿರುವ 45 ಸಾವಿರ ವೇತನ ಕಡಿಮೆ ಎಂದು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟಿದ್ದರು. ನಮ್ಮ ಸರ್ಕಾರ 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಮಾಡಿತ್ತು ಎಂದು ಹೇಳಿದರು.

ಇದೀಗ ಇದೇ ವೈದ್ಯರು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಹಲವು ದಿನಗಳಿಂದ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಅವರ ಮನವಿಯನ್ನು ಪರಿಗಣಿಸಿರಲಿಲ್ಲ.  13 ಬಾರಿ ಸಭೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅವರ ಮನವಿಯನ್ನು ಮಾನವೀಯತೆಯಿಂದ ಪರಿಗಣಿಸಿದ್ದೇವೆ. ಸಂಜೆ 4.30ಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಹಾಗೂ ವೈದ್ಯಕೀಯ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

2008-09ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು 1944 ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಖಾಯಂಗೊಳಿಸಿದ್ದರು. ನಂತರ ಬಂದ ಸರ್ಕಾರಗಳು ಅವರ ಸೇವೆಯನ್ನು ಖಾಯಂಗೊಳಿಸದ ಕಾರಣ ಸಮಸ್ಯೆ ಉಂಟಾಗಿದೆ ಎಂದರು.  ಕೋವಿಡ್ ನಿಯಂತ್ರಣದಲ್ಲಿ ವೈದ್ಯರು, ನರ್ಸ್‍ಗಳು ಉತ್ತಮವಾದ ಕೆಲಸ ಮಾಡಿದ್ದಾರೆ. ಅವರ ಯಾವುದೇ ಬೇಡಿಕೆಗಳಿದ್ದರೂ ಸರ್ಕಾರ ಈಡೇರಿಸಲು ಸಿದ್ದವಿದೆ. ಇಂಥ ಸಮಯದಲ್ಲಿ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಶ್ರೀರಾಮುಲು ಮನವಿ ಮಾಡಿದರು.

2000 ವೈದ್ಯರ ಹುದ್ದೆಗಳು ಖಾಲಿಯಿದ್ದು, ನೇರ ನೇಮಕಾತಿ ಮೂಲಕ ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಿದ್ದೇವೆ. ಶೀಘ್ರವೇ ಆದೇಶ ಹೊರಡಿಸುವುದಾಗಿ ಹೇಳಿದರು.ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದವಾಗಿದೆ. ಸದ್ಯದಲ್ಲೇ ಪದಾಧಿಕಾರಿಗಳ ಸಭೆ ನಡೆಸಲಾಗುವುದು. ಆಶಾ ಕಾರ್ಯಕರ್ತೆಯರು ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೇಡಿಕೆಗಳು ಏನೇ ಇದ್ದರೂ ಪ್ರತಿಭಟನೆ ನಡೆಸುವುದು ಬೇಡ. ಅವರ ಜೊತೆ ನಾನೇ ಖುದ್ದು ಮಾತುಕತೆ ನಡೆಸುತ್ತೇನೆ. ಸಮಸ್ಯೆ ಉಂಟಾಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲೂ ಆ್ಯಂಬುಲೆನ್ಸ್ ಹಾಗೂ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾಗಿಲ್ಲ. ಯಾವ ಭಾಗದಲ್ಲಿ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಪೂರೈಕೆ ಮಾಡಿದ್ದೇವೆ. ಕೊರತೆ ಉಂಟಾದರೆ ತಕ್ಷಣವೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಕೇಂದ್ರದ ಅಧ್ಯಯನ ತಂಡ ರಾಜ್ಯದಲ್ಲಿ ಕೊರೊನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಸಂಪೂರ್ಣ ಮಾಹಿತಿಯನ್ನು ವರದಿ ರೂಪದಲ್ಲಿ ಹಸ್ತಾಂತರ ಮಾಡಿದ್ದೇವೆ. ಒಂದು ವೇಳೆ ಅಧ್ಯಯನ ತಂಡವು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೆ ಅದನ್ನು ಅಳವಡಿಸಿಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಶ್ರೀರಾಮುಲು ಹೇಳಿದರು.

Facebook Comments