“ಜಾಗ ನೀವು ಸೆಲೆಕ್ಟ್ ಮಾಡಿ ನಾನು ರೆಡಿ” : ಸಿದ್ದುಗೆ ರಾಮುಲು ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19-ಮಾನ್ಯ ಸಿದ್ದರಾಮಯ್ಯನವರೇ ನಿಮಗೊಂದು ಸವಾಲು ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರಗಳಲ್ಲಾ ದರೂ ಸರಿಯೇ ನನ್ನ ವಿರುದ್ಧ ಗೆದ್ದು ತೋರಿಸಿ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನು ರಾಜೀನಾಮೆ ಕೊಟ್ಟು ಬರುತ್ತೇನೆ. ಜನ ಯಾರನ್ನು ಗೆಲ್ಲಿಸ್ತಾರೋ ನೋಡೋಣ. ಹೀಗೆ ಟ್ವೀಟರ್‍ನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಸಿದ್ದರಾಮ ಯ್ಯಗೆ ನೇರ ಸವಾಲೆಸೆದಿದ್ದಾರೆ.

ನಾನೇನು ಸ್ವಾರ್ಥದ ಕೆಲಸ ಮಾಡಿದ್ದೇನೆಯೇ ಹೇಳಿ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ನೀವು ಕೇವಲ ನನ್ನನ್ನು ಮಾತ್ರ ಟೀಕಿಸುತ್ತಿಲ್ಲ. ನಮ್ಮ ಇಡೀ ವಾಲ್ಮೀಕಿ ಸಮುದಾಯವನ್ನೇ ಅಪಮಾನಿಸುತ್ತಿದ್ದೀರೀ ಎಂದು ಕಿಡಿಕಾರಿದರು.

ಈ ಹಿಂದೆ ಉಪ ಮುಖ್ಯಮಂತ್ರಿ ಯಾಗಿ ಹಣಕಾಸು ಖಾತೆಯಂತಹ ಪ್ರಮುಖ ಖಾತೆ ಹೊಂದಿದ್ದರೂ ಮುಖ್ಯಮಂತ್ರಿ ಮಾಡಲಿಲ್ಲ ಮತ್ತು ಸುಳ್ಳು ಹೇಳಿಕೊಂಡು ನಿಮ್ಮನ್ನು ನಾಯಕರನ್ನಾಗಿ ರೂಪಿಸಿದ್ದ ಜೆಡಿಎಸ್ ಅನ್ನು ತೊರೆದು ಕಾಂಗ್ರೆಸ್ ಸೇರಿ ಅಲ್ಲೂ ಕೂಡ ಹಿರಿಯ ನಾಯಕರನ್ನು ನಿಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದೀರೀ. ಆರೋಪಗಳನ್ನು ಬಿಟ್ಟು ನೇರವಾಗಿ ಜನರ ಬಳಿಗೆ ಹೋಗಲು ನೀವು ಸಿದ್ಧವಾಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಮಡಿಕೇರಿಯಾಗಲೀ, ಮೈಸೂರಾಗಲೀ ರಾಜ್ಯದ ಎಲ್ಲೇ ಬೇಕಾದರೂ ನಿಮ್ಮ ವಿರುದ್ಧ ಸ್ಪರ್ಧೆಗೆ ಸಿದ್ಧನಿದ್ದೇನೆ. ನೀವು ರಾಜೀನಾಮೆ ಕೊಟ್ಟು ಜನರ ಮುಂದೆ ಬರಲು ಸಿದ್ಧವಿದ್ದೀರಾ ಎಂದು ನೇರ ಟಾಂಗ್ ನೀಡಿದ್ದಾರೆ. ಕುಮಾರಸ್ವಾಮಿ ಅವರ ಅಪ್ಪರಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಹೇಳಿದ್ರಿ. ನಂತರ ಅವರ ಮನೆ ಬಾಗಿಲಿಗೆ ಹೋಗಿ ಕರೆ ತಂದು ಮುಖ್ಯಮಂತ್ರಿ ಮಾಡಿದ್ರಿ. ನಂತರ ಷಡ್ಯಂತ್ರ ಮಾಡಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದ್ರಿ. ನಿಮಗೆ ಮಾನ- ಮರ್ಯಾದೆ ಎಂದರೆ ಏನು ಎಂದು ಗೊತ್ತಿ ದೆಯಾ ಎಂದು ಕಿಡಿಕಾರಿದ್ದಾರೆ.

# ರಾಜೀನಾಮೆ ಕೊಟ್ರಾ..?
ಮೈಸೂರು, ನ.19-ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ನೀಡುತ್ತೇನೆ. ಒಂದು ನಿಮಿಷವೂ ಹುದ್ದೆಯಲ್ಲಿ ಇರುವುದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದರು. ಏನಾಯಿತು ಎಂದು…? ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದರು.

ಬಾದಾಮಿಯಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಶ್ರೀರಾಮುಲು ಸವಾಲು ಹಾಕಿರುವ ವಿಷಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಪಾಪ, ನನ್ನ ವಿರುದ್ಧ ಸೋತಿರುವ ಅವರು, ಈ ರೀತಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರಿಗೆ ಮರ್ಯಾದೆ ಇದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತು. ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಪ್ರಚಾರ ಮಾಡಿದರು.

ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆಯೇ? ಶಾಸಕರಲ್ಲದ ವರಿಗೆ ಉಪಮುಖ್ಯಮಂತ್ರಿ ಮಾಡಿದ್ದಾರೆ. ಪಾಪ, ಶ್ರೀರಾಮುಲು ಬಗ್ಗೆ ಏನು ಮಾತನಾಡೋದು. ಸ್ವಾರ್ಥ ಮಾಡುವವರೆಲ್ಲ ಒಂದು ಕಡೆ ಸೇರಿಕೊಂಡಿದ್ದಾರೆ. ಮೌಲ್ಯ, ಸಿದ್ದಾಂತಗಳು ಏನೂ ಇಲ್ಲ. ಇವರ ಹೇಳಿಕಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ, ಜೆಡಿಎಸ್ ಪರ ಜನ ಇಲ್ಲ. ಹಾಗಾಗಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಮೂವತ್ತು ಸಾವಿರ ಸೀರೆಗಳು ಸಿಕ್ಕಿದವು. ಇದು ಯಾರದ್ದು, ಇದು ಯಾರ ದುಡ್ಡು, ಎಲ್ಲಿಂದ ಬಂತು. ಇದು ಅಕ್ರಮವಲ್ಲವೇ? ಕಾನೂನಿನಲ್ಲಿ ಸೀರೆ ಹಂಚಲು ಅವಕಾಶವಿದೆಯೇ?

ಯೋಗೇಶ್ವರ್, ವಿಶ್ವನಾಥ್ ಹಾಗೂ ಬಿಜೆಪಿ ಫೋಟೋ ಇದೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರ್ಕಾರದಲ್ಲಿದ್ದುಕೊಂಡು ಅಕ್ರಮ ಮಾಡುವ ಇವರಿಗೆ ಯಾವ ನೈತಿಕತೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

Facebook Comments