ಅಂದಾಜು 324.67 ಕೋಟಿ ರೂ. ವೆಚ್ಚದ ಶ್ರೀರಂಗ ಏತ ನೀರಾವರಿ ಯೋಜನೆಗೆ ಸಂಪುಟ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕುಗಳ 277 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಶ್ರೀರಂಗ ಏತ ನೀರಾವರಿ ಯೋಜನೆಯ 324.67 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವುದಾಗಿ ಹೇಳಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಂತರದ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಶ್ರೀರಂಗ ಏತ ನೀರಾವರಿ ಯೋಜನೆಯ ಪ್ರಗತಿ ಕುರಿತಂತೆ ಶುಕ್ರವಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಾ.ಅಶ್ವತ್ಥನಾರಾಯಣ, “2014ರಿಂದ ಕುಂಟುತ್ತಾ ಸಾಗಿರುವ ಈ ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಅದಕ್ಕೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಇರುವ ತೊಡಕುಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟಾಜ್ಞೆ ಮಾಡಿದರು.

“ಮಾಗಡಿ ತಾಲೂಕಿನ 211 ಹಳ್ಳಿಗಳು, ಕುಣಿಗಲ್‌ ತಾಲೂಕಿನ 66 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಇದರಿಂದಾಗಿ ಮಾಗಡಿಯ 66 ಕೆರೆಗಳು, ಕುಣಿಗಲ್‌ನ 17 ಕೆರೆಗಳನ್ನು ತುಂಬಿಸಲು ಹೇಮಾವತಿ ನದಿಯಿಂದ ಏತ ನೀರಾವರಿ ಮೂಲಕ ಹರಿಸುವ 277.5 ಕೋಟಿ ರೂ. ವೆಚ್ಚದ ಯೋಜನೆಯನ್ನು 2014ರಲ್ಲಿ ಆರಂಭಿಸಲಾಗಿತ್ತು.

ಆದರೆ, ಕಾರಣಾಂತರಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಕಾಮಗಾರಿ ಪುನಾರಂಭಿಸಲಾಗುವುದು,” ಎಂದರು. “ಭೂಸ್ವಾಧೀನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುವುದನ್ನು ತಪ್ಪಿಸಲು 277 ಕಿ.ಮೀ. ಉದ್ದದ ರಸ್ತೆ ಬದಿ ಗ್ರ್ಯಾವಿಟಿ ಮೈನ್ ಪೈಪ್ ಅಳವಡಿಸಲು ನಿರ್ಧರಿಸಿದ್ದರಿಂದ ಯೋಜನೆಗೆ 53.42 ಕೋಟಿ ರೂ. ಹೆಚ್ಚುವರಿ ಅನುದಾನ ಬೇಕಾಗಿದ್ದು, ಯೋಜನಾ ವೆಚ್ಚ 324.67 ಕೋಟಿ ರೂ.ಗೆ ಏರಿಕೆಯಾಗಿದೆ.

ಈಗಾಗಲೇ ಪರಿಷ್ಕೃತ ಅಂದಾಜು ಸಿದ್ಧವಾಗಿದ್ದು, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು,” ಎಂದು ತಿಳಿಸಿದರು.

ಭೂಸ್ವಾಧೀನ ತ್ವರಿತಗೊಳಿಸಲು ಸೂಚನೆ  ಯೋಜನೆಗೆ ರಾಮನಗರ ಜಿಲ್ಲೆಯಲ್ಲಿ 57 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, 14 ಎಕರೆ, 24 ಗುಂಟೆ ಜಮೀನನ್ನು ನೇರ ಖರೀದಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಉಳಿದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕುಣಿಗಲ್‌ ತಾಲೂಕಿನಲ್ಲಿ 23 ಎಕರೆ ಜಮೀನು ಬೇಕಾಗಿದ್ದು, ರೈತರು ಭೂಮಿ ನೀಡಲು ಸಿದ್ಧರಿಲ್ಲ. ಹೀಗಾಗಿ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನ (ಎಸ್ಐಎ) ನಡೆಸಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಅಶ್ವತ್ಥನಾರಾಯಣ, “ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಇರುವ ತೊಡಕುಗಳನ್ನು ತಕ್ಷಣವೇ ಬಗೆಹರಿಸಿ ಅಗತ್ಯ ಭೂಮಿ ಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.

ಸುಮಾರು 324.67 ಕೋಟಿ ರೂ. ವೆಚ್ಚದ ಈ ಯೋಜನೆ 2014ರಲ್ಲೇ ಆರಂಭಗೊಂಡರೂ ಇದುವೆರೆಗೆ 163.38 ಕೋಟಿ ರೂ. ವೆಚ್ಚದ ಕಾಮಗಾರಿ ಮಾತ್ರ ನಡೆದಿದೆ. ಮುಂದೆ ಈ ರೀತಿಯ ವಿಳಂಬ ಆಗಬಾರದು. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಆದ್ಯತೆ ಮೇಲೆ ಈ ಕುರಿತು ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದರು.

ಮಾಗಡಿ ಶಾಸಕ ಮಂಜುನಾಥ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ ಸಿಂಗ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್‌ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin