ಸ್ಕೀಪಿಂಗ್ ಚಿನ್ನದ ಪದಕ ಗೆದ್ದು ಶ್ರೀಸುಖಿ ಸಾಧನೆ
ಬೆಂಗಳೂರು, ಜೂ.19- ಸಾಧಿಸುವ ಛಲವಿದ್ದರೆ ವಿಶ್ವವನ್ನೇ ಗೆಲ್ಲಬಹುದು ಎಂಬುದಕ್ಕೆ ಶ್ರೀ ಸುಖಿ ನರೇಗಲ್ ಸಾಕ್ಷಿ. ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಕನ್ನಡ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀ ಸುಖಿ ಅಂತಾರಾಷ್ಟ್ರೀಯ ಜಂಪ್ರೂಪ್ (ಸ್ಕೀಪಿಂಗ್) ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ಕಠ್ಮಂಡುವಿನಲ್ಲಿ ನಡೆದ 16 ವರ್ಷದೊಳಗಿನ ಸೌತ್ ಏಷಿಯನ್ ಜಂಪ್ ರೂಪ್ ಸ್ಪರ್ಧೆಯಲ್ಲಿ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಪಾಕಿಸ್ತಾನದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ನೆರೆ ದೇಶಗಳ ನೂರಾರು ಕ್ರೀಡಾಪಟುಗಳ ಸ್ಪರ್ಧೆಯನ್ನು ಗೆದ್ದ ಶ್ರೀಸುಖಿ ಜಂಪ್ ರೂಪ್ ಸ್ಪರ್ಧೆಯಲ್ಲಿ 2 ಬಂಗಾರದ ಪದಕಗಳನ್ನು ಜಯಿಸುವ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಶ್ರೀ ಸುಖಿ ನರೇಗಲ್ ಜಂಪ ರೂಪ್ ಡಬಲ್ ಡ್ಯೂಜ್ ಸ್ಪೀಡ್ ರಿಲೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ.
ಅಪ್ಪನ ಕನಸು ನನಸು ಮಾಡಿದ ಪುತ್ರಿ:
ಶ್ರೀ ಸುಖಿ ನರೇಗಲ್ ಅವರ ತಂದೆ ಶ್ರೀಪಾದ ನರೇಗಲ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಹೊತ್ತಿದ್ದರೂ ಕೈಗೂಡಿರಲಿಲ್ಲ. ಈಗ ಪುತ್ರಿ ಶ್ರೀ ಸುಖಿ ತಂದೆಯ ಕನಸನ್ನು ನನಸು ಮಾಡುವತ್ತ ಹೆಜ್ಜೆ ಇಟ್ಟಿದ್ದು ಸೌತ್ ಏಷಿಯನ್ ಜಂಪ್ ರೂಪ್ ಸ್ಪರ್ಧೆಯಲ್ಲಿ 2 ಬಂಗಾರದ ಪದಕಗಳನ್ನು ಜಯಿಸಿರುವುದು ಪೋಷಕರ ಮೊಗದಲ್ಲಿ ಸಂತಸ ಮೂಡಿಸಿದೆ. ಶ್ರೀ ಸುಖಿಯು ಕ್ರೀಡಾ ಲೋಕದಲ್ಲಿ ಮತ್ತಷ್ಟು ಉತ್ತುಂಗ ಸಾಧನೆಯನ್ನು ಮಾಡುವಂತಾಗಲಿ.