SSLC ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿ, ದೇವರಿಗೆ ಬಿಟ್ಟ ಗಡ್ಡವೇ ಶಾಪವಾಯ್ತು..!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಮಾ.30- ದೇವರಿಗೆಂದು ಬಿಟ್ಟ ಗಡ್ಡವೇ ಈ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗೆ ಶಾಪವಾಯಿತು! ಗಡ್ಡ ಬಿಟ್ಟಿದ್ದಕ್ಕೆ ಆತ ಪರೀಕ್ಷೆ ಬರೆಯಲು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅನುಮತಿ ನಿರಾಕರಿಸಿದ ಘಟನೆ ವಿಜಯಪುರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಚವನಬಾಯಿ ಗ್ರಾಮದ ನಾಗಪ್ಪ ಸಂಗಪ್ಪ ನಾಲತವಾಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿ.
ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಈ ವಿದ್ಯಾರ್ಥಿ ಹರಕೆ ಹೊತ್ತುಕೊಂಡಿದ್ದ ಕಾರಣಕ್ಕೆ ಗಡ್ಡ ಬಿಟ್ಟಿದ್ದ.

ಶುಕ್ರವಾರ ನಡೆದಿದ್ದ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಹೋದಾಗ ಹಾಲ್ ಟಿಕೆಟ್‍ನಲ್ಲಿದ್ದ ಭಾವಚಿತ್ರಕ್ಕೂ ವಿದ್ಯಾರ್ಥಿಯ ಮುಖಕ್ಕೂ ಹೊಂದಾಣಿಕೆಯಾಗದ ಹಿನ್ನೆಲೆ ಆತ ಪರೀಕ್ಷೆ ಬರೆಯಲು ಮೇಲ್ವಿಚಾರಕರು ನಿರಾಕರಿಸಿದ್ದಾರೆ. ವಿದ್ಯಾರ್ಥಿ ಭಾವಚಿತ್ರದಲ್ಲಿ ಇರುವುದು ನಾನೇ ಎಂದು ಗೋಗರೆದರೂ ಪರೀಕ್ಷಾ ಕೇಂದ್ರದ ಉಸ್ತುವಾರಿ ಮಾತ್ರ ಒಪ್ಪಲಿಲ್ಲ. ಇದರಿಂದ ವಿದ್ಯಾರ್ಥಿ ಪರೀಕ್ಷೆ ಬರೆಯದೆ ಮನೆಗೆ ಹಿಂದಿರುಗಿದ್ದಾನೆ.

ಅಲ್ಲದೆ ಈ ಬಗ್ಗೆ ವಿದ್ಯಾರ್ಥಿ ದೂರು ನೀಡಲು ಮುಂದಾದರೂ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ಸ್ವೀಕರಿಸಿಲ್ಲ. ಘಟನೆಯ ಪ್ರತಿಕ್ರಿಯೆ ನೀಡಿರುವ ಡಿಡಿಪಿಐ ಫೋಟೋ ಹೊಂದಾಣಿಕೆಯಾಗದಿದ್ದರೆ ವಿದ್ಯಾರ್ಥಿ ತಾನು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಪ್ರಮಾಣ ಪತ್ರ ತರಬೇಕಿತ್ತು.
ಈ ಕುರಿತು ಮಾಹಿತಿ ಪಡೆದು ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ