ಕೊರೋನಾಗೆ ಕೇರ್ ಮಾಡದೆ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸರ್ಕಾರ ಸಿದ್ದತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.23- ಕೊರೊನಾ ಅಟ್ಟಹಾಸದ ನಡುವೆ ಇದೇ 25ರಿಂದ ಆರಂಭವಾಗಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸರ್ಕಾರ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, 8.5 ಲಕ್ಷ ಮಕ್ಕಳು ರಾಜ್ಯಾದ್ಯಂತ ಪರೀಕ್ಷೆ ಬರೆಯಲಿದ್ದಾರೆ.

ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯದ ಜತೆಗೆ ರೋಗದ ಭಯ ಕೂಡ ಉಂಟಾಗಿದೆ. ಹೀಗಾಗಿ ಈ ಎರಡೂ ಭಯಗಳನ್ನು ಸರ್ಕಾರ ನಿವಾರಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಅಭಯ ಮೂಡಿಸಿ ಪರೀಕ್ಷೆಗೆ ಅಣಿಗೊಳಿಸಿದೆ. ರಾಜ್ಯಾದ್ಯಂತ ಇರುವ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಮಾರ್ಗಸೂಚಿಗಳನ್ನು ರವಾನಿಸಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ದೂರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವ ಒಂದೂವರೆ ಗಂಟೆ ಮುನ್ನ ಕೇಂದ್ರಗಳಿಗೆ ಬರಬೇಕೆಂದು ಸೂಚನೆ ನೀಡಿದ್ದು, ಈ ಸಂದರ್ಭದಲ್ಲಿ ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪರೀಕ್ಷಾ ಕೇಂದ್ರಗಳ ಒಳಗಡೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬರಬೇಕೆಂದು ಕಡ್ಡಾಯವಾಗಿ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಗೆ ಒಳಪಡಬೇಕಾಗಿರುವುದರಿಂದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಮಾರ್ಕಿಂಗ್ ಮಾಡಲಾಗಿದ್ದು, ಪರೀಕ್ಷಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ತಪಾಸಣೆಗೆ ಒಳಪಟ್ಟ ನಂತರ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಬೇಕು.

ಪರಸ್ಪರ ಕೈ ಕುಲುಕುವುದು, ಮುಟ್ಟುವುದು, ಅಪ್ಪಿಕೊಳ್ಳುವುದು, ಎಲ್ಲೆಂದರಲ್ಲಿ ಉಗುಳುವುದು ಯಾವುದನ್ನೂ ಮಾಡುವಂತಿಲ್ಲ. ಈ ಬಗ್ಗೆ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಇರುವ ಕಿಟಕಿ, ಬಾಗಿಲು, ಮೆಟ್ಟಿಲು ಹತ್ತುವ ಸಂದರ್ಭದಲ್ಲಿ ಕಂಬಿಗಳನ್ನು ಸಹ ಮುಟ್ಟಬಾರದು ಎಂದು ಸೂಚಿಸಿದೆ.

ಈ ಎಲ್ಲಾ ಕ್ರಮಗಳ ಮೇಲೆ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ಶಾಲಾ ಸಿಬ್ಬಂದಿಗಳು, ಸ್ಥಳದಲ್ಲೇ ಇರುವ ಆರೋಗ್ಯ ಸಿಬ್ಬಂದಿಗಳು ನಿಗಾ ವಹಿಸಬೇಕಾಗಿದೆ. ತಪಾಸಣಾ ಸಂದರ್ಭದಲ್ಲಿ ಪರೀಕ್ಷಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಕೆಮ್ಮುವಾಗ ಹಾಗೂ ಸೀನಿವಾಗ ಮೂಗು ಹಾಗೂ ಬಾಯಿಗೆ ಕರ ವಸ್ತ್ರವನ್ನು ಉಪಯೋಗಿಸಬೇಕು. ಸಹ ವಿದ್ಯಾರ್ಥಿಗಳಿಂದ ಯಾವುದೇ ವಸ್ತುಗಳನ್ನು ಪಡೆಯಬಾರದು, ಬೇರೆ ವಿದ್ಯಾರ್ಥಿಗಳಿಂದ ನೀರು ಸಹ ತೆಗೆದುಕೊಳ್ಳಬಾರದು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ಮೇಲ್ವಿಚಾರಕರಿಗೆ ತಿಳಿಸಬೇಕು. ನೀರಿನ ಬಾಟಲ್ ತರುವುದು ಸೂಕ್ತ.

ಪರೀಕ್ಷಾ ಕೇಂದ್ರ ಪ್ರವೇಶಿಸುವುದರಿಂದ ಹಿಡಿದು ನಿರ್ಗಮಿಸುವವರೆಗೂ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಸರ್ಕಾರ ರೂಪಿಸಿದೆ.

ಮಾರ್ಚ್‍ನಲ್ಲಿ ಪ್ರಕಟವಾಗಿದ್ದ ಪರೀಕ್ಷೆ ಮೂರು ತಿಂಗಳ ನಂತರ ನಡೆಯುತ್ತಿದೆ. ಈ ಹಿಂದೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದ್ದರು. ಮುಂದೂಡಿಕೆಯಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿತ್ತು. ಸರ್ಕಾರ ದೂರದರ್ಶನದ ಮೂಲಕ, ಆನ್‍ಲೈನ್‍ನಲ್ಲಿ ಮಕ್ಕಳಿಗೆ ಶಿಕ್ಷಣ ಪರೀಕ್ಷಾ ಸಿದ್ದತೆಯ ಬಗ್ಗೆ ಸಲಹೆ ನೀಡಿತ್ತು.

ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಕೊನೆಯವರೆಗೂ ಇತ್ತು. ಪರೀಕ್ಷೆ ರದ್ದುಗೊಳಿಸುವಂತೆ ಸಾಕಷ್ಟು ಪ್ರತಿಭಟನೆಗಳು ನಡೆದವು. ಹಲವು ಶಿಕ್ಷಣ ತಜ್ಞರು, ವಿಚಾರವಂತರು ಪರೀಕ್ಷೆ ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಪಕ್ಕದ ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಆದರೆ, ಕರ್ನಾಟಕದಲ್ಲಿ ಶಿಕ್ಷಣ ಸಚಿವರಾದ ಸುರೇಶ್‍ಕುಮಾರ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡು ದಿನಾಂಕ ನಿಗದಿಗೊಳಿಸಿ ಎಲ್ಲಾ ಸಿದ್ದತೆ ಮಾಡಿದಂತೆ ಇದೇ 25ರಿಂದ ಪರೀಕ್ಷೆ ಆರಂಭವಾಗಲಿದೆ. 8.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಊರಿಗೆ ತೆರಳಿದ್ದು, ಕಾರ್ಮಿಕರು ವಲಸೆ ಹೋಗಿದ್ದ ಕಾರಣ ಹಲವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆ ಕೇಂದ್ರಗಳ ಬದಲಾವಣೆ ಮಾಡಿಕೊಡಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕಿನ ಗ್ರಾಫ್ ಏರುತ್ತಲೇ ಇದೆ.

ಈ ನಡುವೆ ಎಸ್​ಎಸ್​ಎಲ್​ಸಿ ಪರೀಕ್ಷೆ 25ರಿಂದ ಆರಂಭವಾಗಲಿದೆ. 8.50 ಲಕ್ಷ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ, ಭದ್ರತಾ, ಆರೋಗ್ಯ ಸಿಬ್ಬಂದಿ ಸೇರಿದಂತೆ ಸುಮಾರು 10 ಲಕ್ಷ ಮಂದಿ ಪಾಲ್ಗೊಳ್ಳಬೇಕಾಗಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯದ ಜತೆಗೆ ಕೊರೊನಾ ಭಯ ಆವರಿಸಿದೆ. ಅದೇ ರೀತಿ ಪೋಷಕರಿಗೂ ಕೂಡ ಮಕ್ಕಳ ಭವಿಷ್ಯ ಒಂದೆಡೆಯಾದರೆ ಆರೋಗ್ಯದ ಭೀತಿ ಮತ್ತೊಂದೆಡೆ ಕಾಡುತ್ತಿದೆ. ಪರೀಕ್ಷಾ ಸಿಬ್ಬಂದಿಗೂ ಕೂಡ ಆರೋಗ್ಯದ ಆತಂಕ ಶುರುವಾಗಿದೆ. ಈ ಎಲ್ಲದರ ನಡುವೆ ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪರೀಕ್ಷೆ ಆರಂಭವಾಗಲಿದೆ.

ಜೂ.18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಆದ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಪರೀಕ್ಷಾ ಮಂಡಳಿ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.

Facebook Comments