ರಾಜ್ಯಾದ್ಯಂತ ಮೊದಲ ದಿನದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ಕೊರೊನಾ ಸೋಂಕಿನ ಭೀತಿ ನಡುವೆಯೂ ಇಂದಿನಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ 3209 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ನಡೆಸಿ ಎಕ್ಸಾಂ ಬರೆಯಲು ಅವಕಾಶ ಕಲ್ಪಿಸಲಾಯಿತು.

ಸೋಂಕು ಲಕ್ಷಣಗಳು ಕಂಡುಬಂದ ಕೆಲ ವಿದ್ಯಾರ್ಥಿಗಳ ಮನವೊಲಿಸಿ ಮತ್ತೆ ಪರೀಕ್ಷೆ ನಡೆಸುವ ಆಶ್ವಾಸನೆ ನೀಡಿ ವಾಪಸ್ ಕಳುಹಿಸಲಾಯಿತು. ಉಳಿದಂತೆ ರಾಜ್ಯದೆಲ್ಲೆಡೆ ಯಶಸ್ವಿಯಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಹಲವಾರು ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಗಂಗಾವತಿಯಲ್ಲಿ ಶಾಲೆಯನ್ನು ತಳಿರುತೋರಣಗಳಿಂದ ಅಲಂಕರಿಸಿ ಪರೀಕ್ಷೆ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ನಮಿಸುವ ಮೂಲಕ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ 367 ವಿದ್ಯಾರ್ಥಿಗಳನ್ನು ತಲಪಾಡಿ ಚೆಕ್‍ಪೋಸ್ಟ್‍ನಿಂದ ಬರಮಾಡಿಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ವಾಹನಗಳಲ್ಲಿ ತಲುಪಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.

3209 ಪರೀಕ್ಷಾ ಕೇಂದ್ರಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸಿ ಒಳಬಿಡಲಾಯಿತು. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು.

ಎಲ್ಲ ವಿದ್ಯಾರ್ಥಿಗಳೂ ಮಾಸ್ಕ್ ಧರಿಸಿ ಪರೀಕ್ಷೆ ಬರೆದರು. ಕಂಟೈನ್ಮೆಂಟ್ ಝೋನ್‍ಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್ ನೀಡಿ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

ನಿಗದಿತ ಸಮಯಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದೆ ಹತಾಶರಾಗಿದ್ದ ವಿದ್ಯಾರ್ಥಿಗಳು ಇಂದಿನಿಂದ ಆರಂಭವಾದ ಪರೀಕ್ಷೆಯಲ್ಲಿ ಲಘುಬಗೆಯಿಂದ ಪಾಲ್ಗೊಂಡು ದ್ವಿತೀಯ ಭಾಷೆ ಪರೀಕ್ಷೆ ಬರೆದರು.  ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದ ಆಂಧ್ರ ಮೂಲದ ವಿದ್ಯಾರ್ಥಿಗೆ ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿ ಪೋಷಕರೊಂದಿಗೆ ಮಾತುಕತೆ ನಡೆಸಿ ಮರು ಪರೀಕ್ಷೆ ನಡೆಸುವ ಭರವಸೆ ನೀಡಿ ವಾಪಸ್ ಕಳುಹಿಸಿಕೊಟ್ಟರು.

ಅದೇ ರೀತಿ ಕೆಲವೊಂದು ಪ್ರದೇಶಗಳಲ್ಲೂ ಸೋಂಕು ಲಕ್ಷಣ ಕಾಣಿಸಿಕೊಂಡ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಸಿಗಲಿಲ್ಲ ಎಂದು ತಿಳಿದುಬಂದಿದೆ.

Facebook Comments