ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಕ್ತಾಯ : ನಿಟ್ಟುಸಿರುಬಿಟ್ಟ ವಿದ್ಯಾರ್ಥಿಗಳು, ಪೋಷಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.3- ಕೊರೊನಾ ಭೀತಿ ನಡುವೆಯೇ ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.ಕಳೆದ ಜು.25ರಿಂದ ಆರಂಭಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವುದೇ ಅಡಚಣೆಯಿಲ್ಲದೆ ಸುಸೂತ್ರವಾಗಿ ನಡೆದಿದ್ದು, ಇನ್ನೇನಿದ್ದರೂ ಮೌಲ್ಯಮಾಪನ ಮತ್ತು ಫಲಿತಾಂಶದ ಹೊಣೆಗಾರಿಕೆ ಶಿಕ್ಷಣ ಇಲಾಖೆ ಮೇಲಿದೆ.

ಹಲವಾರು ಒತ್ತೆಡಗಳ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲು ಸರ್ಕಾರ ದೃಢ ನಿರ್ಧಾರ ಕೈಗೊಂಡು ಅದರಲ್ಲಿ ಈಗ ಸಫಲತೆ ಸಾಧಿಸಿದ್ದು, ಇಡೀ ದಕ್ಷಿಣ ಭಾರತ ರಾಜ್ಯಗಳಲ್ಲಿ ಕರ್ನಾಟಕದ ಈ ಸಾಧನೆ ಹುಬ್ಬೇರುವಂತೆ ಮಾಡಿದೆ.

ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ವಿದ್ಯಾರ್ಥಿಗಳು ಕೂಡ ಯಾವುದೇ ಅಳುಕಿಲ್ಲದೆ ನಿರ್ಭಯವಾಗಿ ಪರೀಕ್ಷೆ ಬರೆಯಲು ಸ್ವತಃ ಶಿಕ್ಷಣ ಸಚಿವರೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಅಧಿಕಾರಿಗಳು ಹಾಗೂ ಭದ್ರತೆಯಲ್ಲಿ ಪೊಲೀಸರು, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದರ ಮಹತ್ವ ತಿಳಿಸಿದ್ದರು.

ಇಂದು ಪರೀಕ್ಷೆ ಮುಕ್ತಾಯಗೊಂಡಿರುವುದರಿಂದ ಮೌಲ್ಯಮಾಪನಕ್ಕೆ ಎಲ್ಲ ಸಿದ್ಧತೆಗಳನ್ನೂ ಕೂಡ ಮಾಡಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ಚುರುಕಾಗಿ ಕೆಲಸ ಮಾಡಿದ್ದಕ್ಕೆ ಸಿಎಂ ಕೂಡ ಅಭಿನಂದಿಸಿದ್ದಾರೆ.

ಈ ಬಾರಿಯ ಪರೀಕ್ಷೆ ದಾಖಲೆ ಎನ್ನಬಹುದು. ಸರಿಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಶೇ.98 ರಿಂದ ಶೇ.99ರ ವರೆಗೂ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮಳೆ ಸೇರಿದಂತೆ ಹಲವು ಅಡಚಣೆಗಳ ನಡುವೆಯೇ ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೂಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ಮಲೆನಾಡು ಪ್ರದೇಶ, ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದರೂ ಸಹ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ.

Facebook Comments