ಗಮನಿಸಿ : ಪರೀಕ್ಷೆ ಎದುರಿಸುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಲಾಕ್‍ಡೌನ್ ಹಿನ್ನೆಲೆಯಲ್ಲಿ ವಸತಿ ಶಾಲೆ, ವಸತಿ ನಿಲಯ, ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಮೇ 29ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ವಸತಿ ನಿಲಯ/ವಸತಿ ಶಾಲೆಗಳಲ್ಲಿ ವಾಸ್ತವ್ಯವಿದ್ದಂತಹ ಎಸ್‍ಎಸ್‍ಎಲ್‍ಸಿ ರೆಗ್ಯೂಲರ್ ವಿದ್ಯಾರ್ಥಿಗಳು ಮೂಲ ಕೇಂದ್ರದಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲದಿದ್ದಲ್ಲಿ ಎಸ್‍ಎಸ್‍ಎಲ್‍ಸಿ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರ ದೂರವಾಣಿ ಅಥವಾ ಮೊಬೈಲ್ ಮೂಲಕ ಸಂಪರ್ಕಿಸಿ ತಾವು ಸದ್ಯ ವಾಸ ಮಾಡುತ್ತಿರುವ ಮನೆಗೆ ಹತ್ತಿರವಾದ ಪರೀಕ್ಷಾ ಕೇಂದ್ರವನ್ನು ಗುರುತಿಸಿ ಪ್ರಸ್ತುತ ಇರುವ ಪರೀಕ್ಷಾ ಕೇಂದ್ರದಿಂದ ಗುರುತಿಸಿರುವ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ಬದಲಾಯಿಸಿಕೊಳ್ಳಬೇಕು. 29ರೊಳಗೆ ಈ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬೇಕು.

ನಿಗದಿತ ದಿನಾಂಕದೊಳಗೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ನಿಗದಿಪಡಿಸಲಾಗಿರುವ ಪರೀಕ್ಷಾ ಕೇಂದ್ರದ ತಾಲ್ಲೂಕಿನ ಒಳಗಡೆಯೇ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ಇರುವುದಿಲ್ಲ.

ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಹಳೆಯ ನೋಂದಣಿ ಸಂಖ್ಯೆಯೇ ಮುಂದುವರಿಯಲಿದೆ.
ಪರೀಕ್ಷಾ ಕೇಂದ್ರ ಬದಲಾವಣೆ ನಂತರ ಕೆಳಕಂಡ ಮೂರು ವಿಧಾನಗಳಲ್ಲಿ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ. ಪ್ರಸ್ತುತ ಓದುತ್ತಿರುವ ಶಾಲೆಯ ಮುಖ್ಯ ಶಿಕ್ಷಕರಿಂದ ವಾಟ್ಸಾಪ್ ಮೂಲಕ ಪ್ರವೇಶ ಪತ್ರ ಬರೆದು ಪ್ರಿಂಟ್‍ಔಟ್ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಬಹುದು.

ಅಲ್ಲದೆ, ಹೊಸದಾಗಿ ಆಯ್ಕೆ ಮಾಡಿಕೊಂಡಿರುವ ಪರೀಕ್ಷಾ ಕೇಂದ್ರವಿರುವ ಶಾಲೆಯ ಮುಖ್ಯ ಶಿಕ್ಷಕರಿಂದ ಪ್ರಿಂಟ್‍ಔಟ್ ಪಡೆದುಕೊಳ್ಳಬಹುದಾಗಿದೆ. ತಾವು ಪ್ರಸ್ತುತ ವಾಸವಿರುವ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ತಿಳಿಸಿ ಪ್ರವೇಶ ಪತ್ರ ಪಡೆಯಬಹುದಾಗಿದೆ.

ಒಮ್ಮೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡ ನಂತರ ಈ ಹಿಂದೆ ನಿಗದಿಪಡಿಸಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಪರೀಕ್ಷಾ ಕೇಂದ್ರ ಬದಲಾವಣೆಗೆ ಮುಂಚೆ ವಿದ್ಯಾರ್ಥಿಯು ವಸತಿ ಶಾಲೆ, ವಸತಿ ನಿಲಯ, ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿ ಎಂದು ಮುಖ್ಯಶಿಕ್ಷಕರು ಖಚಿತಪಡಿಸಿಕೊಳ್ಳಬೇಕು.

ಪರೀಕ್ಷಾ ಕೇಂದ್ರ ಬದಲಾವಣೆಗೆ ಅಥವಾ ಪ್ರವೇಶ ಪತ್ರ ಪಡೆದುಕೊಳ್ಳುವ ಪ್ರಕ್ರಿಯೆಗೆ ಯಾವುದೇ ಶುಲ್ಕವಿರುವುದಿಲ್ಲ. ಯಾವುದೇ ತೊಂದರೆ ಅಥವಾ ಅಡಚಣೆ ಉಂಟಾದಲ್ಲಿ ಈ ಕೆಳಕಂಡ ಸಹಾಯವಾಣಿಗೆ ನೇರವಾಗಿ ಸಂಪರ್ಕಿಸಬಹುದು. ಸ್ಥಿರ ದೂರವಾಣಿ 080-23310075, 23310076, ಮೊಬೈಲ್ ಸಂಖ್ಯೆ: 9739131393.

ಲಾಕ್‍ಡೌನ್ ಅವಧಿಯನ್ನು ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ತಂಗಿದ್ದ ವಿದ್ಯಾರ್ಥಿಗಳು ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಹಲವಾರು ವಲಸೆ ಕುಟುಂಬಗಳು ನಗರ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದ ಮನೆಗಳನ್ನು ಖಾಲಿ ಮಾಡಿ ಗ್ರಾಮಗಳಿಗೆ ಹಿಂದಿರುಗಿದ್ದಾರೆ.

ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯ ಹಾಗೂ ವಸತಿ ಶಾಲೆಗಳನ್ನು ಜಿಲ್ಲಾಡಳಿತದವರು ಹೊರ ರಾಜ್ಯಗಳಿಂದ ಬಂದಂತಹವರನ್ನು ಕ್ವಾರಂಟೈನ್‍ನಲ್ಲಿಡಲು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಿಕೊಂಡಿದ್ದಾರೆ.

ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳು ಹಿಂದಿರುಗಲು ಅವಕಾಶವಿಲ್ಲ. ಹಾಗೆಯೇ ಬೇರೆ ಸ್ಥಳಗಳಿಂದ ತಮ್ಮ ಸ್ವಂತ ಸ್ಥಳಗಳಿಗೆ ವಾಪಸ್ ತೆರಳಿರುವ ವಲಸೆ ಕಾರ್ಮಿಕರ ಮಕ್ಕಳು ಸಹ ತಮ್ಮ ಶಾಲೆಗಳಿಗೆ ಹಿಂದಿರುಗಲು ಅವಕಾಶವಿರುವುದಿಲ್ಲ.

ಅಂತಹ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದ್ದು, ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಳ್ಳಲು ಈ ತಿಂಗಳ 29ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

Facebook Comments

Sri Raghav

Admin