ತಮಿಳುನಾಡಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಜೂ.9- ದೇಶಾದ್ಯಂತ ಡೆಡ್ಲಿ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ನಿನ್ನೆಯಷ್ಟೇ ತೆಲಂಗಾಣ ರಾಜ್ಯ ಸರ್ಕಾರವೂ ಸಹ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೆ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.

ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇನ್ನೂ ಐದು ರಾಜ್ಯಗಳು ಸಹ 10ನೆ ತರಗತಿ ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿವೆ.

ಆಂತರಿಕ ಮೌಲ್ಯಮಾಪನದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲು ನಿರ್ಧರಿಸಿರುವ ತೆಲಂಗಾಣ ಮತ್ತು ತಮಿಳುನಾಡು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿದೆ.  ಇತ್ತ ಕರ್ನಾಟಕದಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಗೊಳಿಸಬೇಕೆಂದು ಹಲವು ಶಿಕ್ಷಣ ತಜ್ಞರು ಮತ್ತು ಪೋಷಕರು ರಾಜ್ಯ ಸರ್ಕಾರದ ಮೇಲೆ ವ್ಯಾಪಕ ಒತ್ತಡ ಹೇರಿದ್ದಾರೆ.

ಪರೀಕ್ಷೆ ರದ್ದು ಇಲ್ಲ: ತಮಿಳುನಾಡು ಮತ್ತು ತೆಲಂಗಾಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಗೊಳಿಸಿರುವ ಕುರಿತಂತೆ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಗದಿಯಂತೆ ಜೂ.25ರಂದು ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ಸೂಚನೆ ನೀಡಿದ್ದಾರೆ.

ಒಂದು ವೇಳೆ ಪರೀಕ್ಷಾ ಸಮಯದಲ್ಲಿ ಸಮಸ್ಯೆಯಾದರೆ ಬೇರೆ ದಿನಾಂಕ ನಿಗದಿಪಡಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಪರೀಕ್ಷೆ ರದ್ದುಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Facebook Comments