2ನೇ ದಿನವೂ ಸುಸೂತ್ರವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.27- ಇಂದು ನಡೆದ ಎಸ್‍ಎಸ್‍ಎಲ್‍ಸಿಯ ಗಣಿತ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.  ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು.

ಪರೀಕ್ಷಾ ಕೇಂದ್ರದ ಸುತ್ತ ವಾಹನ ಸಂಚಾರಕ್ಕೂ ಕೂಡ ನಿರ್ಬಂಧ ಹೇರಿ ಜನಸಂದಣಿ ಸೇರದಂತೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದರು.

ಗಡಿ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿದ್ದರೆ, ಇನ್ನು ಮಂಗಳೂರಿನಲ್ಲಿ ಬೆಂಗಾಲ್ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ನದಿ ದಾಟಲು ದೋಣಿ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

ತುರ್ತು ಸೇವೆಗಾಗಿ ಆಶಾ ಕಾರ್ಯಕರ್ತೆಯರನ್ನು ಕೂಡ ಬಳಸಿಕೊಳ್ಳಲಾಗಿತ್ತು. ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಚಿಕಿತ್ಸೆಗಾಗಿ ಒಆರ್‍ಎಸ್ ಪ್ಯಾಕೆಟ್‍ಗಳು, ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ಕೂಡ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

ಹಲವು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ, ಇತ್ತ ಬೆಂಗಳೂರಿನ ಜೀವನ್‍ಭೀಮಾ ನಗರ, ಫ್ರೇಜರ್‍ಟೌನ್‍ನ ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ, ಎಚ್‍ಎಎಲ್ ಸೇರಿದಂತೆ ವಿವಿಧೆಡೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಪರೀಕ್ಷೆ ಪ್ರಾರಂಭಕ್ಕೂ ಸಂವಾದ ನಡೆಸಿದರು.

ಕೊರೊನಾ ಆತಂಕ ಬೇಡ. ಎಲ್ಲರೂ ಏಕಾಗ್ರತೆಯಿಂದ ಪರೀಕ್ಷೆಯನ್ನು ಬರೆಯಿರಿ. ನಿಮ್ಮ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ ಇರಲಿ ಎಂದು ಸಚಿವರು ಸಲಹೆ ನೀಡಿದರು.

Facebook Comments