ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ, ಚಿಕ್ಕಬಳ್ಳಾಪುರ ಫಸ್ಟ್, ಬಾಲಕಿಯರೇ ಬೆಸ್ಟ್..!
ಬೆಂಗಳೂರು,ಆ.10- ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಸಿದ್ದಾರೆ.
ಕೋವಿಡ್ ಸಂಕಷ್ಟದಿಂದಾಗಿ ಪೂರ್ವ ನಿಗದಿತ ಪರೀಕ್ಷೆ ಮುಂದೂಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇವೆಲ್ಲದರ ನಡುವೆ ಇಂದು ರಾಜ್ಯದಲ್ಲಿ ಒಟ್ಟಾರೆ ಶೇ.71.80ರಷ್ಟು ಫಲಿತಾಂಶ ಬಂದಿದೆ.
ಒಟ್ಟು 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆರು ವಿದ್ಯಾರ್ಥಿಗಳು 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಜಿ.ಕೆ.ಅಮೋಘ್ , ಚಿರಾಯು, ನಿಖಿಲೇಶ್, ಮಂಡ್ಯದ ೀರಜ್ ಕಡ್ಡಿ, ಸುಳ್ಯದ ಅನುಷ್, ಚಿಕ್ಕಮಗಳೂರಿನ ತನ್ಮಯ್ 625 ಅಂಕಗಳನ್ನು ಗಳಿಸಿ ಟಾಪರ್ಗಳಾಗಿದ್ದಾರೆ.
ಈ ಬಾರಿ ಎ, ಬಿ, ಸಿ ಎಂದು ಜಿಲ್ಲೆಗಳ ಫಲಿತಾಂಶವನ್ನು ವರ್ಗೀಕರಿಸಲಾಗಿದೆ. 11 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, 43 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನವನ್ನು ಬೆಂಗಳೂರು ಗ್ರಾಮಾಂತರ, ದ್ವಿತೀಯ ಸ್ಥಾನವನ್ನು ಮಧುಗಿರಿ ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ನಗರ ಪ್ರದೇಶದಲ್ಲಿ ಶೇ.73.41, ಗ್ರಾಮೀಣ ಪ್ರದೇಶದಲ್ಲಿ 77.48, ಕನ್ನಡದ ಮಾಧ್ಯಮದಲ್ಲಿ 74.49 , ಸರ್ಕಾರಿ ಶಾಲೆಗಳಲ್ಲಿ 72.79ರಷ್ಟು ಫಲಿತಾಂಶ ಬಂದಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಪ್ರಕಟಿಸಿದರು.
ವಿದ್ಯಾರ್ಥಿಗಳ ಮೊಬೈಲ್ಗೆ ನೇರವಾಗಿ ಫಲಿತಾಂಶ ಬಂದಿದ್ದು, karresults.nic.in / www.karresults.nic.in ವೆಬ್ಸೈಟ್ನಲ್ಲೂ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಕಳೆದ ಜೂ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿ ಜುಲೈ 3ಕ್ಕೆ ಕೊನೆಗೊಂಡಿತ್ತು. ಈ ಬಾರಿ 8,48,196 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
2879 ಪರೀಕ್ಷಾ ಕೇಂದ್ರಗಳು, 43,270 ಕೊಠಡಿಗಳನ್ನು ಬಳಸಿಕೊಳ್ಳಲಾಗಿತ್ತು. ಮಾರ್ಚ್ ತಿಂಗಳಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಬೇಕಿತ್ತು. ಅದೇ ವೇಳೆ ಮಹಾಮಾರಿ ಕೊರೊನಾ ಸೋಂಕು ಕಾಲಿಟ್ಟ ಪರಿಣಾಮ ಈ ಬಾರಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಸರಿಸುಮಾರು ಎರಡು ತಿಂಗಳ ನಂತರ ಹಲವು ಅಡ್ಡಿ ಆತಂಕಗಳ ನಡುವೆಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಅವರ ಸತತ ಪ್ರಯತ್ನದಿಂದಾಗಿ ಪರೀಕ್ಷೆ ನಡೆಸಿದ್ದರು.