ಸುಶಾಂತ್ ಸಾವು ಪ್ರಕರಣ : ನಟಿ ರಿಯಾ ಮನೆ ಮೇಲೆ ಎನ್‍ಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಸೆ.4- ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪುತ್ ಸಾವು ಪ್ರಕರಣದ ತನಿಖೆ ಚುರುಕುಗೊಂಡಷ್ಟು ಹೊಸ ತಿರುವು ಪಡೆಯುತ್ತಿದೆ. ಈ ಪ್ರಕರಣದ ಸಂಬಂಧ ಸುಶಾಂತ್ ಗೆಳತಿ ಮತ್ತು ಚಿತ್ರನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಸೌಹಿಕ್ ಚಕ್ರವರ್ತಿ ಮತ್ತು ಮಾದಕ ವಸ್ತು ಪೂರೈಕೆದಾರ ಸ್ಯಾಮುವಲ್ ಮಿರಾಂಡ ಅವರ ಮುಂಬೈನಲ್ಲಿರುವ ಮನೆಗಳ ಮೇಲೆ ಮಾದಕ ನಿಯಂತ್ರಣ ಮಂಡಳಿ ಎನ್‍ಸಿಬಿ ದಾಳಿ ನಡೆಸಿದೆ.

ರಿಯಾ ಸಹೋದರ ಸೌವಿಕ್ ಚಕ್ರವರ್ತಿ ಡ್ರಗ್ಸ್ ಪೆಡ್ಲರ್(ಮಾದಕವಸ್ತು ಮಾರಾಟಗಾರ) ಎಂಬುದು ದೃಢಪಟ್ಟಿದ್ದು ಆತ ಅತ್ಯಧಿಕ ಬೆಲೆಗೆ ಮಾರಿಜುವಾನ ಡ್ರಗ್ಸ್ ನ್ನು ಬಾಲಿವುಡ್‍ನ ಕೆಲ ನಟನಟಿಯರಿಗೆ ಮತ್ತು ಶ್ರೀಮಂತ ಕುಟುಂಬದ ಯುವಕ-ಯುವತಿಯರಿಗೆ ಪೂರೈಸುತ್ತಿದ್ದ ಎಂಬ ಸಂಗತಿ ಬಹಿರಂಗಗೊಂಡಿದೆ.

ಸುಶಾಂತ್ ಮನೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಸ್ಯಾಮುವಲ್ ಮಿರಾಂಡ ರಿಯಾ ಮತ್ತು ಸೌಹಿಕ್ ಸೂಚನೆ ಮೇರೆಗೆ ಬಾಲಿವುಡ್ ನಟನಿಗೆ ಡ್ರಗ್ಸ್ ಪೂರೈಸುತ್ತಿದ್ದ ಎಂಬ ಸಂಗತಿಯೂ ಸಹ ಬಯಲಾಗಿದೆ ಎಂದು ಎನ್‍ಸಿಬಿ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಸೌಹಿಕ್ ಡ್ರಗ್ಸ್ ಸೆಲ್ಲರ್ ಆಗಿದ್ದು ಈತ ಐದು ಪಟ್ಟು ದುಬಾರಿ ಬೆಲೆಗೆ ಮಾರಿ ಜುವಾನ ಮತ್ತು ಇನ್ನಿತರ ಬೆಲೆ ಬಾಳುವ ಡ್ರಗ್ಸ್‍ಗಳನ್ನು ಪೂರೈಕೆ ಮಾಡುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇಂದು ಬೆಳಗ್ಗೆ ಮುಂಬೈನಲ್ಲಿರುವ ರಿಯಾ, ಸೌಹಿಕ್ ಮತ್ತು ಸ್ಯಾಮುವಲ್‍ನ ಮನೆಗಳ ಮೇಲೆ ದಾಳಿ ನಡೆಸಿದ ಎನ್‍ಸಿಬಿ ಅಧಿಕಾರಿಗಳು ಕೆಲವು ವಸ್ತುಗಳು ಮತ್ತು ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಅಧಿಕಾರಿಗಳು ನಿನ್ನೆ ಮತ್ತೊಬ್ಬ ಡ್ರಗ್ ಪೆಡ್ಲರ್(ಮಾದಕವಸ್ತು ಮಾರಾಟಗಾರ)ನನ್ನು ಬಂಧಿಸಿದ್ದರು.

ಈತ ಸುಶಾಂತ್ ಸಿಂಗ್ ಪ್ರೇಯಸಿ ಮತ್ತು ಚಿತ್ರನಟಿ ರಿಯಾ ಚಕ್ರವರ್ತಿ ಸಹೋದರ ಸೌವಿಕ್ ಜೊತೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.  ಶೋವಿಕ್ ಹಲವಾರು ಮಾದಕ ವಸ್ತು ಮಾರಾಟಗಾರರೊಂದಿಗೆ ವಾಟ್ಸಪ್‍ನಲ್ಲಿ ಮಾದಕವಸ್ತು ಪೂರೈಕೆ ಕುರಿತು ಸಂದೇಶಗಳನ್ನು ರವಾನಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬಸೀತ್, ಸೂರ್ಯದೀಪ್, ಮಲ್ಹೋತ್ರ ಸೇರಿದಂತೆ ಹಲವು ಡ್ರಗ್ ಪೆಡ್ಲರ್‍ಗಳೊಂದಿಗೆ ವಾಟ್ಸಪ್‍ನಲ್ಲಿ ಸಂದೇಶ ರವಾನೆ ಮಾಡಿರುವ ಬಗ್ಗೆ ಈತ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ನಿನ್ನೆಯಷ್ಟೇ ಜೈದ್ ಎಂಬ ಡಗ್ಸ್ ಪೆಡ್ಲರ್‍ಗಳನು ಎನ್‍ಸಿಬಿ ಬಂಧಿಸಿತ್ತು.  ಈ ಮಧ್ಯೆ ಈ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಇಡಿ ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Facebook Comments