ಕುರುಬರ ST ಮೀಸಲಾತಿಗಾಗಿ ಫೆ.7ಕ್ಕೆ ಬೃಹತ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5- ಕರ್ನಾಟಕದ ಕುರುಬರನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿ ನಡೆಸಿದ ಕುರುಬರ ಐತಿಹಾಸಿಕ ಪಾದಯಾತ್ರೆ ಅಭೂತಪೂರ್ವ ಯಶಸ್ವಿಯಾಗಿದ್ದು, ಭಾನುವಾರ (ಫೆ.7) ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಕುರುಬರ ಐತಿಹಾಸಿಕ ಬೃಹತ್ ಸಮಾವೇಶ ನಡೆಯಲಿದೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಎಸ್ಟಿ ಮೀಸಲಾತಿಗಾಗಿ ಹಕ್ಕೋತ್ತಾಯ ಮಾಡಲು ಕಾಗಿನೆಲೆಯಿಂದ ಬೆಂಗಳೂರಿನವರೆಗೆ 340ಕಿ.ಮೀ. ನಡೆಸಿದ ಪಾದಯಾತ್ರೆಗೆ ಜಾತ್ಯತೀತ ಬೆಂಬಲ ದೊರೆತಿದೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಮೂಲಕ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಆಗಬೇಕು ಎಂದು ಪ್ರಧಾನಮಂತ್ರಿಗಳಿಗೂ ಕೂಡ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಫೆ.7ರಂದು ಬೆಂಗಳೂರು ಹೊರವಲಯದಲ್ಲಿರುವ ಮಾದಾವರ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ರಾಜ್ಯಾದ್ಯಂತ ಇರುವ ಕುರುಬ ಸಮುದಾಯದ ಸುಮಾರು 10ಲಕ್ಷಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಹಕ್ಕೊತ್ತಾಯವನ್ನು ಮಂಡಿಸಲಿದ್ದಾರೆ. ರಾಜ್ಯ ಸರ್ಕಾರ ನಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕೆಂದು ಅವರು ಹೇಳಿದರು. ಸಮುದಾಯದ ಎಲ್ಲರೂ ಈಗಾಗಲೇ ಒಗ್ಗಟ್ಟಾಗಿ ಈ ಬೇಡಿಕೆಯನ್ನು ಪ್ರಭುತ್ವದ ಮುಂದೆ ಇಟ್ಟಿದ್ದೇವೆ. ಪ್ರಭುತ್ವ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ ಮುಖಂಡರಾದ ಕೆ.ವಿರೂಪಾಕ್ಷಪ್ಪ, ಕೆ.ಮುಕುಡಪ್ಪ, ಕೆ.ಇ.ಕಾಂತೇಶ್, ಟಿ.ಬಿ.ಬಳಗಾವಿ, ಸೋಮಶೇಖರ್ ಸೇರಿದಂತೆ ಸಮುದಾಯದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

Facebook Comments