ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ ಸಾಲ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಜೂ.12- ಆಶಾ ಕಾರ್ಯಕರ್ತೆಯರಿಗೂ ಸಹಕಾರ ಇಲಾಖೆ ವತಿಯಿಂದ ಸಾಲ ಕೊಡಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.

ರಾಜ್ಯ ಸರ್ಕಾರದ ಸಹಕಾರ ಇಲಾಖೆ ವತಿಯಿಂದ ಕೋವಿಡ್ -19 ವಿರುದ್ಧ ಹೋರಾಡಿದ ಆಶಾ ಕಾರ್ಯಕರ್ತೆಯರಿಗೆ ಕೊಡ ಮಾಡುವ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡ ವರ್ಗದವರಿಗೆ ಬಡವರ ಬಂಧು ಇಲ್ಲವೇ ಸ್ತ್ರೀ ಶಕ್ತಿ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ.

ಇದರಿಂದ ಅವರ ಆರ್ಥಿಕ ಸಬಲೀಕರಣ ಆಗುವುದಲ್ಲದೆ ಸಾಲ ಮರುಪಾವತಿಯೂ ನೂರಕ್ಕೆ ನೂರು ಆಗಲಿದೆ. ಅದೇ ರೀತಿ ಆಶಾ ಕಾರ್ಯಕರ್ತೆಯರಿಗೂ ಸಾಲ ಕೊಡಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.ಕೊರೊನಾ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ 53 ಕೋಟಿ ರೂಪಾಯಿಯನ್ನು ಸಂಗ್ರಹಿಸಿಟ್ಟಿದ್ದೇವೆ.

ಇನ್ನು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು. ರಾಜ್ಯದಲ್ಲಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ ಕೊಡಲು ಬೇಕಾಗುವ 12.7 ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆಯಿಂದಲೇ ಭರಿಸಲಾಗುತ್ತಿದೆ. ಯಾರಿಗಾದರೂ ಹಣ ಬಂದಿಲ್ಲವಾದರೆ ಸಹಕಾರ ಇಲಾಖೆಯ ಡೆಪ್ಯುಟಿ ರಿಜಿಸ್ಟರ್ ಗಮನಕ್ಕೆ ತನ್ನಿ ಎಂದು ಸಚಿವರು ತಿಳಿಸಿದರು.

ಬಿ.ಎ.ಬಸವರಾಜು ಅವರು ಒಳ್ಳೆಯ ಕೆಲಸಗಾರರು. ಸಂಪುಟ ಸಭೆಯಲ್ಲೂ ಸಹ ದಾವಣಗೆರೆ ಜಿಲ್ಲಾಗೆ ಅನುದಾನ ಕೇಳುತ್ತಾರೆ. ಅವರ ಈ ಕಾರ್ಯವೈಖರಿ ಎಲ್ಲರಿಗೂ ಮಾದರಿ ಎಂದು ಹೇಳಿದರು.  ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜು ಮಾತನಾಡಿ, ಆಶಾ ಕಾರ್ಯಕರ್ತೆಯರ ಸೇವೆ ಗಣನೀಯ. ಇದಕ್ಕೋಸ್ಕರ ರಾಜ್ಯದಲ್ಲಿರುವ ಇಡೀ 42 ಸಾವಿರ ಆಶಾ ಕಾರ್ಯಕರ್ತರಿದ್ದಾರೆ. ಅವರಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಸಹಕಾರ ಸಚಿವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಚಿವರಾದ ಸೋಮಶೇಖರ್ ಅವರು ಕಾರ್ಯನಿರತರಾಗಿದ್ದಾರೆ ಎಂದು ಹೇಳಿದರು. ಸಂಸದರಾದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ರಾಜ್ಯದ 41,500 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಕೊಡಲಾಗುತ್ತಿರುವುದು ಉತ್ತಮ ವಿಷಯ ಎಂದು ತಿಳಿಸಿದರು. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಷಣ್ಮುಗಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಇತರರು ಇದ್ದರು.

Facebook Comments