ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನಮಾನ : ಸಚಿವ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ.19- ಎಚ್. ವಿಶ್ವನಾಥ್ ಅವರಿಗೆ ಮುಂದಿನ ದಿನಗಳಲ್ಲಿ ಸ್ಥಾನಮಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಗಂಗಾ ಮಹಾಯೋಗಿಗಳ ಗದ್ದುಗೆಗೆ ತೆರಳಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಟಿಕೆಟ್ ಕೈ ತಪ್ಪಿದ್ದರ ಬಗ್ಗೆ ನಾವು ಸಹ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇವೆ.

ಅವರಿಗೆ ಮುಂದಿನ ದಿನಗಳಲ್ಲಿ ಸ್ಥಾನ ಕೊಡುವ ಭರವಸೆ ಕೊಟ್ಟಿದ್ದಾರೆ. ಅಲ್ಲದೆ, ಕೋರ್ ಕಮಿಟಿ ಪಟ್ಟಿಯಲ್ಲಿ ವಿಶ್ವನಾಥ್ ಅವರ ಹೆಸರನ್ನು ಸೇರಿಸಲಾಗಿದ್ದರೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈಗಾಗಲೇ ಮುಖ್ಯಮಂತ್ರಿಗಳು ಶೇ.90ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಸೂಕ್ತ ವ್ಯವಸ್ಥೆ ಆಗಲಿದೆ. ಇನ್ನು ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರ ಕ್ಷೇತ್ರಗಳಿಗೆ ಚುನಾವಣೆಯಾಗಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನುದಾನಕ್ಕೆ ಯಾರಿಂದಲೂ ಅಸಮಾಧಾನವಿಲ್ಲ: ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿಯ ಯಾವೊಬ್ಬ ಶಾಸಕರೂ ಅಸಮಾಧಾನಗೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಳಿ ಹೇಳಿಕೊಂಡಿದ್ದಾರೆ, ಅಷ್ಟೇ. ಬಿಟ್ಟರೆ ಯಾರಿಂದಲೂ ಅಸಮಾಧಾನ ಇಲ್ಲ ಎಂದು ಸಚಿವರು ತಿಳಿಸಿದರು.

ಎಪಿಎಂಸಿ ವ್ಯವಸ್ಥೆಗೆ ಧಕ್ಕೆ ಇಲ್ಲ: ಎಪಿಎಂಸಿ ಇರುವುದೇ ರೈತರಿಗೋಸ್ಕರ. ಕಾಯ್ದೆ ತಿದ್ದುಪಡಿಯಿಂದ ಯಾರಿಗೂ ತೊಂದರೆಯಾಗಿಲ್ಲ. ಇದರಿಂದ ಎಪಿಎಂಸಿ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದು. ಕಾಯ್ದೆ ತಿದ್ದಪಡಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಎಲ್ಲಿ ಬೇಕಿದ್ದರೂ ತಮ್ಮ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳು ಬರುವುದರಿಂದ ಯಾವುದೇ ಸಮಸ್ಯೆಯಾಗದು. ಅವರೇ ರೈತರ ಹೊಲಗಳಿಗೆ ಬಂದು ನೇರವಾಗಿ ಖರೀದಿಸಲಿದ್ದಾರೆ ಎಂದು ತಿಳಿಸಿದರು.

Facebook Comments