“ಕಾಂಗ್ರೆಸ್-ಜೆಡಿಎಸ್ ಕನಸು ಭಗ್ನವಾಗಲಿದೆ, ಬಿಜೆಪಿ ಸರ್ಕಾರ ಸುಭದ್ರವಾಗಲಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಕಾಂಗ್ರೆಸ್-ಜೆಡಿಎಸ್ ನಾಯಕರ ಕನಸು ಕನಸಾಗಿಯೇ ಉಳಿಯಲಿದ್ದು, ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಡಿ.9ರಂದು ಬಿಜೆಪಿ ಸರ್ಕಾರ ಇನ್ನಷ್ಟು ಸುಭದ್ರವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಭವಿಷ್ಯ ನುಡಿದರು.

ಕ್ಷೇತ್ರದಲ್ಲಿ ಇಂದು ಬೆಳಗ್ಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ ಅವರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವುದಿಲ್ಲ. ಎರಡು ಪಕ್ಷಗಳ ನಾಯಕರ ಕನಸು ಈಡೇರಲು ಮತದಾರರು ಬಿಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮುಂದಿನ ಮೂರು ವರ್ಷಗಳ ಅವಧಿಗೆ ಬಿಜೆಪಿ ಸರ್ಕಾರ ಇನ್ನಷ್ಟು ಭದ್ರವಾಗಲಿದೆ. ನಾವು 15ಕ್ಕೆ 15 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಇನ್ನಷ್ಟು ಭದ್ರವಾಗಲಿದೆ. ಯಾರೇ ಏನೇ ತಂತ್ರ ಮಾಡಿದರೂ ಬಿಜೆಪಿ ಸರ್ಕಾರ ಬಂಡೆಯಷ್ಟೇ ಗಟ್ಟಿಯಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುರ್ಚಿ ನೆನಪದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಏನೇನೊ ಹಗಲುಗನಸು ಬೀಳುತ್ತದೆ. ಲೋಕಸಭೆ ಚುನಾವಣೆಯಲ್ಲೇ ಅವರಿಗೆ ಮತದಾರರು ಮುಟ್ಟಿನೋಡಿಕೊಳ್ಳುವ ಹಾಗೇ ಪಾಠ ಕಲಿಸಿದ್ದಾರೆ. ಆದರೂ ಇನ್ನೂ ಬುದ್ದಿ ಕಲಿತಿಲ್ಲ ಎಂದು ವ್ಯಂಗ್ಯವಾಡಿದರು.

ಐದು ವರ್ಷದಲ್ಲಿ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಿದ್ದೇನೆ, ಅಮೃತ್‍ನಾರಾಯಣಸ್ವಾಮಿ ಜಾತ್ರ ಮಹೋತ್ಸಸಕ್ಕೆ ಒಂದು ಲಕ್ಷಕ್ಕೂ ಜನರ ಊಟದ ವ್ಯವಸ್ಥೆಗೆ ಸಮುದಾಯ ಭವನವನ್ನು ನಿರ್ಮಿಸಿಕೊಟ್ಟಿದ್ದೇನೆ ಎಂದು ಹೇಳಿದರು.  ಶಾಸಕನಾಗಿದ್ದಾಗ ಕ್ಷೇತ್ರದಲ್ಲಿರುವ ದೇವಸ್ಥಾಗಳಿಗೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲೆಂದು ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ.

ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಂದೇ ಒಂದೂ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಬಿಜೆಪಿಗೆ ಬಂದಿದ್ದೇನೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸಮರ್ಥಿಸಿಕೊಂಡರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕಂದಾಯ ಸಚಿವ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಚಲನಚಿತ್ರ ನಟಿ ಶೃತಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅರುಣ್ ಸೋಮಣ್ಣ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಬೆಳಗ್ಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದರು.

ರೋಡ್ ಶೋ, ಬೈಕ್ ರ್ಯಾಲಿ, ಕಾರ್ಯಕರ್ತರ ಸಮಾವೇಶ, ಶಕ್ತಿಕೇಂದ್ರದ ಮೂಲಕ ಕಾರ್ಯ ಕರ್ತರನ್ನು ಮನವೊಲಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಎಚ್.ಗೊಲ್ಲಹಳ್ಳಿ, ಹಂಪಾಪುರ, ತಿಪ್ಪೂರು, ಗೋಣಿಪುರ, ಗಂಗಸಂದ್ರ, ಹೆಮ್ಮಿಗೆ ಪುರ, ಅಗರ ದೊಡ್ಡಿಪಾಳ್ಯ, ಭೀಮನಕುಪ್ಪೆ, ಸುಬ್ಬರಾಯನಪಾಳ್ಯ ಸೇರಿದಂತೆ ನಾನಾ ಕಡೆ ಬಿಜೆಪಿ ಕಾರ್ಯಕರ್ತರು ಎಸ್.ಟಿ.ಸೋಮಶೇಖರ್ ಪರವಾಗಿ ಮತಯಾಚನೆ ಮಾಡಿದರು.

Facebook Comments