ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ಶತಾಯ ಗತಾಯ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಭರ್ಜರಿ ಪ್ರಚಾರ ನಡೆಸುವ ಮೂಲಕ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಇಂದು ಬೆಳಗ್ಗೆ ಉಲ್ಲಾಳದ ಸ್ಪಟಿಕಪುರ ಶ್ರೀ ನಂಜಾವಧೂತ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಮೂಲಕ ಪ್ರಚಾರ ಆರಂಭಿಸಿದ ಅವರಿಗೆ ಹಿರಿಯ ಮುತ್ಸದ್ದಿ , ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರರು ಪ್ರಚಾರ ನಡೆಸಿ ಸೋಮಶೇಖರ್‍ರನ್ನು ಗೆಲ್ಲಿಸುವಂತೆ ಮತದಾರರಿಗೆ ಕರೆ ಕೊಟ್ಟರು.

ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ವಿಶೇಷವಾದ ಕಾರ್ಯ ತಂತ್ರ ರೂಪಿಸಿದ್ದಾರೆ. ನಾನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಲಿಲ್ಲ.ನನ್ನನ್ನು ಬಿಡಿಎ ಅಧ್ಯಕ್ಷನನ್ನಾಗಿ ಮಾಡಿದರೂ ಯಾವ ಕೆಲಸ ಕಾರ್ಯಗಳು ನಡೆಯಲು ಬಿಡಲಿಲ್ಲ.

ಈ ಬಗ್ಗೆ ನಾನು ಅನೇಕ ಬಾರಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನ ವಾಗಲಿಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನರಿಗೂ ಇದನ್ನು ಗಮನಕ್ಕೆ ತಂದಿದ್ದೆ. ನಮ್ಮ ಹಿತ ಕಾಪಾಡಲು ಸಾಧ್ಯವಾಗಲಿಲ್ಲ ಎಂದ ಮೇಲೆ ಅನಿವಾರ್ಯವಾಗಿ ಪಕ್ಷ ಬಿಡಬೇಕಾದ ಪರಿಸ್ಥಿತಿ ಬಂದಿತು ಎಂದು ಸೋಮಶೇಖರ್ ಶ್ರೀಗಳ ಬಳಿ ಅಳಲು ತೋಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಯಶವಂತಪುರದಲ್ಲಿ ನನ್ನ ಗೆಲುವು ನೂರಕ್ಕೆ ನೂರರಷ್ಟು ಖಚಿತವಾಗಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಒಳಒಪ್ಪಂದ ಮಾಡಿಕೊಂಡಿರುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಈಗ ನಾನು ಇಬ್ಬರು ನಾಯಕರು ಮಾತನಾಡಿದ ಆಡಿಯೋ ಬಿಡುಗಡೆ ಮಾಡಿದರೆ ಚುನಾವಣಾ ಗಿಮಿಕ್ ಎನ್ನುತ್ತಾರೆ.

ಸೂಕ್ತ ಸಂದರ್ಭದಲ್ಲಿ ಇದನ್ನು ಬಿಡುಗಡೆಗೊಳಿಸುವೆ ಎಂದು ಹೇಳಿದರು. ಶ್ರೀಗಳ ಆಶೀರ್ವಾದ ನನ್ನ ಮೇಲಿದೆ. ನಿಮ್ಮಂಥವರು ಗೆದ್ದು ಮಂತ್ರಿಯಾಗಬೇಕೆಂದು ಹಾರೈಸಿದ್ದಾರೆ. ಶ್ರೀಗಳ ಬೆಂಬಲ ಸಿಕ್ಕಿರುವುದು ನನಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಇನ್ನು ಎಸ್.ಟಿ.ಸೋಮಶೇಖರ್ ಪರವಾಗಿ ಎಸ್.ಎಂ.ಕೃಷ್ಣ , ಶೋಭಾ ಕರಂದ್ಲಾಜೆ, ಆರ್. ಅಶೋಕ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿ ಗಳು ಅಬ್ಬರದ ಪ್ರಚಾರ ನಡೆಸಿ ಕ್ಷೇತ್ರದೆಲ್ಲೆಡೆ ಬಿಜೆಪಿ ಪರವಾದ ಅಲೆಯನ್ನು ಸೃಷ್ಟಿಸಿದರು.

Facebook Comments