ಅನರ್ಹರೆಂಬ ಪಟ್ಟಿ ಕಳಚಿದ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಿದ ಎಸ್.ಟಿ.ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.9- ಕ್ಷೇತ್ರದ ಜನತೆ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ನನ್ನನ್ನು ಅನರ್ಹರೆಂಬ ಹಣೆಪಟ್ಟಿಯಿಂದ ತೆಗೆದುಹಾಕಿ ಅರ್ಹರೆಂದು ತೀರ್ಮಾನ ಕೊಟ್ಟಿದ್ದಾರೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ನನ್ನ ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರ ಪರವಾಗಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಯಶವಂತಪುರ ಕ್ಷೇತ್ರದಾದ್ಯಂತ ನನ್ನ ಪರವಾಗಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ, ಅಶೋಕ್, ಸೋಮಣ್ಣ, ಕೃಷ್ಣಪ್ಪ , ದಾಸರಹಳ್ಳಿ ಮುನಿರಾಜು ಸೇರಿದಂತೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ನನ್ನ ಅಭಿನಂದನೆಗಳು ಎಂದರು.

ನನ್ನ ಜತೆಯಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಸಹ ಪ್ರಾಮಾಣಿಕವಾಗಿ ಪ್ರಚಾರ ನಡೆಸಿದ್ದರಿಂದ ಬಿಜೆಪಿಗೆ ಜಯ ಲಭಿಸಿದೆ. ನಾನು ಮಂತ್ರಿಯಾಗುತ್ತೇನೆ ಎಂದು ಎಲ್ಲೂ ಮತ ಯಾಚಿಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಮತ ಯಾಚಿಸಿದೆ. ಅದರಂತೆ ಜನತೆ ನನ್ನ ಕೈ ಹಿಡಿದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Facebook Comments