ವಸತಿ ಯೋಜನೆಗಳಿಗೆ ಆದ್ಯತೆ : ಎಸ್.ಟಿ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಯಶವಂತಪುರ, ಡಿ.18-ಬಡವರ ಸೂರಿನ ಕನಸನ್ನು ನನಸು ಮಾಡಲು ವಸತಿ ಯೋಜನೆಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ. ಕ್ಷೇತ್ರದ ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಚಕಲ್ಲು ಗ್ರಾಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು,

ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ 94ಸಿಸಿ ಅಡಿಯಲ್ಲಿ ಹಕ್ಕುಪತ್ರ ಸೇರಿ ಅಗತ್ಯ ಭೂ ದಾಖಲಾತಿಗಳನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ವಸತಿ ಯೋಜನೆಗಳಡಿ ಲಭ್ಯವಿರುವ ಸಹಾಯಧನ ಹಾಗೂ ಸಾಲ ಸೌಲಭ್ಯ ಕೊಡಿಸಲಾಗುವುದೆಂದರು. ಕಂದಾಯ ಅಧಿಕಾರಿಗಳು ಈ ಸಂಬಂಧ ಬಡವರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ತಾಕೀತು ಮಾಡಿದರು.

ಉಪ ಚುನಾವಣೆಯಲ್ಲಿ ಮತದಾರರು ಅಭಿವೃದ್ಧಿ ಪರ ಮತ ನೀಡಿದ್ದಾರೆ, ಈ ನಿಟ್ಟಿನಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ ಶಾಸಕರು, ಲೋಕೋಪಯೋಗಿ ಇಲಾಖೆಯಿಂದ ಗುಲಗಂಜನಹಳ್ಳಿ ಗ್ರಾಮದಿಂದ ತಾವರೆಕೆರೆ ಮುಖ್ಯರಸ್ತೆವರೆಗಿನ ಸಂಪರ್ಕ ರಸ್ತೆ, ಮಾಳಿಗೊಂಡನಹಳ್ಳಿ ಅಶ್ವತ್ಥಕಟ್ಟೆ ರಸ್ತೆ ಹಾಗೂ ಹೊಸಕೆರೆ ಕಾಲನಿಯಿಂದ ಮುಕ್ತಿನಾಗ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳಿಗೆ ಈ ವೇಳೆ ಭೂಮಿ ಪೂಜೆ ನೆರವೇರಿಸಲಾಯಿತು.

ಬೆಂಗಳೂರು ದಕ್ಷಿಣ ತಾಲ್ಲೂಕು ತಹಶಿಲ್ದಾರ್ ಶಿವಪ್ಪ ಲಮಾಣಿ, ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ವೇಣುಗೋಪಾಲ್, ಉಪಾಧ್ಯಕ್ಷ ಮಹೇಶ್, ಮಾಜಿ ಉಪಾಧ್ಯಕ್ಷ ಪ್ರಭು, ರಾಮೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೇಣುಗೋಪಾಲ, ಪಿಡಬ್ಲ್ಯೂಡಿ ಎಇಇ ಬೋರೇಗೌಡ, ಎಇ ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook Comments