ಹೆಚ್ಚಿನ ಬೆಲೆಗೆ ದಿನಸಿ-ತರಕಾರಿ ಮಾರಾಟ ಮಾಡಿದರೆ ಕಠಿಣ ಕ್ರಮ : ಸಚಿವ ಎಸ್.ಟಿ.ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ದಿನಸಿ ಹಾಗೂ ತರಕಾರಿಗಳನ್ನು ಮೂಲಬೆಲೆಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಾರ್ವಜನಿಕರ ಬಳಿ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬರುತ್ತಿದ್ದು ಅಂತಹವರ ವಿರುದ್ಧ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಚಿವರಾದ ನಂತರ ಮೊದಲ ಭಾರಿಗೆ ಭೇಟಿ ನೀಡಿದ ಸಚಿವರು ಅಧಿಕಾರಿಗಳೊಂದಿಗೆ ಅತಿ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಬಗ್ಗೆ ಏನೆಲ್ಲಾ ಕ್ರಮ ಕೈಗೊಂಡಿದ್ದೀರಾ ಎಂಬ ಬಗ್ಗೆ ಮಾಹಿತಿ ಪಡೆದರು.

ನಂತರ ಮಾತನಾಡಿದ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆಯ 480 ಮತ್ತು 275 ತರಕಾರಿ ಮಳಿಗೆಗಳನ್ನು ತಾತ್ಕಾಲಿಕವಾಗಿ ದಾಸನಪುರ ಕೃಷಿಉತ್ಪನ್ನ ಮಾರುಕಟ್ಟೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ‌

ಅಲ್ಲದೇ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸುಮಾರು 71 ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿರುವ ಮಾರುಕಟ್ಟೆ ಇದಾಗಿದೆ ಎಂದರು. ಇನ್ನೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಿರಿದಾಗಿರುವ ಕಾರಣ ಇದೀಗ ತಾತ್ಕಾಲಿಕವಾಗಿ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಅಲ್ಲೇ ಇರಬೇಕೋ ಅಥವಾ ಮತ್ತೆ ಯಶವಂತಪುರ ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕೋ ಎಂಬುದನ್ನು ಚಿಂತನೆ ಮಾಡಲಾಗುವುದು ಎಂದರು.

ಈಗಾಗಲೇ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಎಸ್.ಆರ್‌ ವಿಶ್ವನಾಥ್ ಬಳಿ ಮಾತನಾಡಿದ್ದು ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಓದಗಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆಯ ನಿರ್ದೇಶಕ ಕರೀಗೌಡ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

Facebook Comments

Sri Raghav

Admin