ಮೈಸೂರು ದಸರಾ ಸಂಭ್ರಮ, ಗೌರವದ ಸಂಕೇತ ಸಚಿವ ಎಸ್.ಟಿ.ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ. 17- ಮೈಸೂರು ದಸರಾ ಮಹೋತ್ಸವ ಈ ನಾಡಿಗೆ ಅತ್ಯಂತ ಸಂಭ್ರಮದ ಹಾಗೂ ಗೌರವದ ಸಂಕೇತ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಚಾಮುಂಡಿ ಬೆಟ್ಟದಲ್ಲಿ ಇಂದು ನಡೆದ ದಸರಾ ಮಹೋತ್ಸವದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಹಂಪಿಯ ಮಹಾನವಮಿ ದಿಬ್ಬದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಆಚರಿಸುತ್ತಿದ್ದ ದಸರಾ ಉತ್ಸವವನ್ನು ಮೈಸೂರಿನ ಅರಸರು ಮುಂದುವರಿಸಿದರು. ರಾಜಪ್ರಭುತ್ವದ ನಂತರ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು. ದಸರಾ ಎಂದರೆ ಎಲ್ಲೆಡೆ ಸಂಭ್ರಮ- ವೈಭವ ಮನೆ ಮಾಡಿರುತ್ತದೆ. ಆದರೆ ಈ ಬಾರಿ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದವರು ಹೇಳಿದರು.

ಜಾಗತಿಕವಾಗಿ ಸಮಸ್ಯೆ ಉಂಟುಮಾಡಿರುವ ಕೊರೊನಾ ಸಾಂಕ್ರಾಮಿಕ ಸೋಂಕು ಹರಡುವುದನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇರುವುದರಿಂದ ದಸರಾ ಮಹೋತ್ಸವದ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸುತ್ತಿಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಆದರೆ ದಸರಾ ಮಹೋತ್ಸವದ ಸಂಪ್ರದಾಯ ಮತ್ತು ಪರಂಪರೆಯನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಂದಿಧ್ವಜ ಪೂಜೆ ಹಾಗೂ ಜಂಬೂಸವಾರಿ ಕಾರ್ಯಕ್ರಮಗಳನ್ನು ಮಾತ್ರ ಆಚರಿಸಲಾಗುತ್ತಿದೆ ಎಂದರು.

ಕೊರೊನಾ ಸೋಂಕಿನ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿ ಡಾ. ಟಿ.ಆರ್. ನವೀನ್, ಪೌರ ಕಾರ್ಮಿಕ ಮಹಿಳೆ ಮರಗಮ್ಮ, ಹಿರಿಯ ನರ್ಸ್ ರುಕ್ಮಿಣಿ, ಪೋಲಿಸ್ ಪೇದೆ ಪಿ.ಕುಮಾರ್, ಅನಾಥ ಶವಗಳ ಮುಕ್ತಿದಾತ ಅಯೂಬ್ ಅಹಮದ್ ಮತ್ತು ಆಶಾ ಕಾರ್ಯಕರ್ತೆ ನೂರ್ ಜಾನ್ ಅವರಿಗೆ ಸನ್ಮಾನ ಮಾಡಲಾಯಿತು.  ಸನ್ಮಾನಿತರ ಪೈಕಿ ಪೋಸ್ ಪೇದೆ ಪಿ.ಕುಮಾರ್ ಅವರ ಬದಲಾಗಿ ಅವರ ಪತ್ನಿ ಸನ್ಮಾನ ಸ್ವೀಕರಿಸಿದರು.

ನವರಾತ್ರಿಯ ಮೊದಲ ದಿನವಾದ ಇಂದು ಮುಂಜಾನೆ 4.30ರಿಂದಲೇ ಚಾಮುಂಡಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.  ನಂತರ ಮೂಲ ಚಾಮುಂಡೇಶ್ವರಿ ದೇವಿಗೆ ಹಂಸವಾಹಿನಿ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶೃಂಗರಿಸಿ, ಬೆಳ್ಳಿ ರಥದಲ್ಲಿ ಕೂರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಚಿವರಾದ ಎಸ್ ಟಿ ಸೋಮಶೇಖರ್, ಬಿ. ಸಿ. ಪಾಟೀಲ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ರಾಮದಾಸ್, ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಮೇಯರ್ ತಸ್ಲೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇಂದಿನ ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

Facebook Comments