ಆತ್ಮನಿರ್ಭರ ಯೋಜನೆ ಜಾರಿಯಲ್ಲಿ ನಾವೇ ಮುಂದು : ಸಚಿವ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7- ಪ್ರಸಕ್ತ ಸಾಲಿನಲ್ಲಿ 24.36 ಲಕ್ಷ ರೈತರಿಗೆ ಅಲ್ಪಾವಧಿ, ದೀರ್ಘಾವಧಿ, ಬೆಳೆಸಾಲವಾಗಿ 15,300 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಪ್ರಸಕ್ತ ಸಾಲಿನ ಏಪ್ರಿಲ್‍ವರೆಗೆ 2567413 ರೈತರಿಗೆ 17,260.48 ಕೋಟಿ ರೂ. ಸಾಲ ನೀಡುವ ಮೂಲಕ ಗುರಿಗಿಂತ ಹೆಚ್ಚಿನ ರೈತರಿಗೆ ಹೆಚ್ಚಿನ ಮೊತ್ತದ ಸಾಲವನ್ನು ನೀಡಿದ್ದೇವೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

2020-21ನೇ ಆರ್ಥಿಕ ವರ್ಷ ಪ್ರಾರಂಭವಾಗುವ ಹೊಸ್ತಿಲಲ್ಲೇ ಕೊರೋನಾ ಮಹಾಮಾರಿ ವಿಶ್ವದಾದ್ಯಂತ ಆವರಿಸಿಕೊಂಡು ಆರ್ಥಿಕ ನಷ್ಟವನ್ನು ತಂದೊಡ್ಡಿತ್ತು. ಇಂತಹ ಸಮಯದಲ್ಲಿಯೂ ಸಹ ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮದಿಂದ ಇಂದು ಎಲ್ಲ ರೈತ ಬಾಂಧವರಿಗೆ ಸಾಲ ಲಭ್ಯವಾಗುವಂತಾಗಿದೆ ಎಂದು ಸಚಿವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಈಗಾಗಲೇ ಹಾಕಿಕೊಂಡಿರುವ 15,300 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಮೀರಿ ಸಾಲವನ್ನು ವಿತರಣೆ ಮಾಡಲಾಗಿದ್ದು, 2567413 ರೈತರಿಗೆ 17,260.48 ಕೋಟಿ ರೂ. ಸಾಲ ನೀಡಲಾಗಿದೆ ಎಂದರು. ರೈತರಿಗೆ ಎಷ್ಟು ಪ್ರಮಾಣದಲ್ಲಿ, ಯಾವ ಯಾವ ವಿಭಾಗದಲ್ಲಿ ಸಾಲ ನೀಡಲಾಗಿದೆ. ಬಡವರ ಬಂಧು, ಕಾಯಕ, ಎಸ್‍ಸಿಎಸ್‍ಟಿ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೇಗಿದೆ ಎಂಬಿತ್ಯಾದಿ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಈ ಸಂದರ್ಭದಲ್ಲಿ ಮಾಹಿತಿ ಪಡೆದು, ಶೀಘ್ರದಲ್ಲಿ ಗುರಿಯನ್ನು ತಲುಪುವಂತೆಯೂ ಸೂಚನೆ ನೀಡಿದ್ದ. ಇದೀಗ ಅಪೆಕ್ಸ್‍ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿ ತಂದಿದೆ ಎಂದು ಅವರು ತಿಳಿಸಿದರು.

ಆತ್ಮನಿರ್ಭರದಲ್ಲಿ ಸಾಧನೆ: ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮುಂದಿದೆ. ಈ ಮೂಲಕ ಯೋಜನೆ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಹಾಗೂ ನಬಾರ್ಡ್ ಸಹ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಮಾಹಿತಿ ನೀಡಿದರು.

ಆತ್ಮನಿರ್ಭರ ಯೋಜನೆಯಡಿ 1 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರೂಪಾಯಿಯಂತೆ ಸಾಲ ನೀಡಿಕೆಗೆ ಅವಕಾಶವಿದ್ದು, ಈ ಪೈಕಿ 1549 ಸಹಕಾರ ಸಂಘಗಳನ್ನು ಗುರುತಿಸಿ, 949 ಪ್ಯಾಕ್ಸ್ ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರಲ್ಲಿ 614 ಪ್ಯಾಕ್ಸ್ ಗಳಿಗೆ 198.96 ಕೋಟಿ ರೂಪಾಯಿ ಮಂಜೂರಾಗಿರುತ್ತದೆ ಎಂದು ಸಚಿವರು ತಿಳಿಸಿದರು.

ಹೀಗಾಗಿ ಇದರ ಅನುಷ್ಠಾನಕ್ಕಾಗಿ 21 ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮುಖಾಂತರ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದರು.
ಆರ್ಥಿಕ ಸ್ಪಂದನ ಯೋಜನೆಯಡಿ ಬಹುತೇಕ ಡಿಸಿಸಿ ಬ್ಯಾಂಕ್ ಗಳು, ಅಪೆಕ್ಸ್ ಬ್ಯಾಂಕ್ ಗಳು ಹಾಗೂ ನಬಾರ್ಡ್ ನಿಂದ ಉತ್ತಮ ಸಾಧನೆ ತೋರಿದ್ದು, ಶೇ. 96 ಗುರಿ ಮುಟ್ಟಲಾಗಿದೆ. ಅಂದರೆ 2020-21ನೇ ಸಾಲಿಗೆ 39,072 ಕೋಟಿ ಮೊತ್ತದ ಸಾಲ ವಿತರಣೆ ಗುರಿಯಲ್ಲಿ 37366 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಕೃಷಿ ಸಾಲಗಳ ವಿತರಣೆ: ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೂ.3 ಲಕ್ಷಗಳ ಬೆಳೆ ಸಾಲ ಮತ್ತು ಶೇ.3 ರ ಬಡ್ಡಿ ದರದಲ್ಲಿ ರೂ.10 ಲಕ್ಷಗಳ ವರೆಗಿನ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗುತ್ತಿದೆ.

2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.14500 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮತ್ತು 0.70 ಲಕ್ಷ ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ 1200 ಕೋಟಿ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಿದ್ದು, ಇಲ್ಲಿಯವರೆಗೆ ವರೆಗೆ ಒಟ್ಟು 25.24 ಲಕ್ಷ ರೈತರಿಗೆ ರೂ.16191.35 ಕೋಟಿಗಳ ಅವಧಿ ಕೃಷಿ ಸಾಲ ಮತ್ತು 0.43 ಲಕ್ಷ ರೈತರಿಗೆ ರೂ.1069.13 ಕೋಟಿಗಳ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆ ಮಾಡಿದ್ದು, ಶೇ.100 ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದರು.

2017-18ನೇ ಸಾಲಿನಲ್ಲಿ 21,04,455 ರೈತರಿಗೆ 11618.89 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿತ್ತು. 2018-19ನೇ ಸಾಲಿನಲ್ಲಿ 20,14,951 ರೈತರಿಗೆ 11350.52 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ 22,60525 ರೈತರಿಗೆ 13734.47 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿತ್ತು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.

Facebook Comments