ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ವಿತರಿಸಿದ ಸಚಿವ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಯಶವಂತಪುರ : ಕೊರೋನಾ ಸಂಕಷ್ಟದಿಂದ ಕಂಗಾಲಾಗಿರುವ ರೈತರು ಹಾಗೂ ಬಡವರ ನೆರವಿಗೆ ಧಾವಿಸಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಹೇರೋಹಳ್ಳಿ ವಾರ್ಡಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಮೀಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಬಡವರಿಗೆ ಉಚಿತವಾಗಿ ತರಕಾರಿ ವಿತರಿಸಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭ ಸಂದರ್ಭದಲ್ಲಿ ಬಡವರಿಗೆ ನೆರವಾಗುವ ಕಾರ್ಯ ಹಮ್ಮಿಕೊಂಡಿರುವುದು ಖುಷಿ ತಂದಿದೆ. ಕೋವಿಡ್ ನಡುವೆ ಬೃಹತ್ ಪ್ರಮಾಣದಲ್ಲಿ ರೈತರಿಂದ ನೇರವಾಗಿ ಉತ್ತಮ ಬೆಲೆಗೆ ತರಕಾರಿ ಖರೀದಿಸಿ ಸಾವಿರಾರು ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಏಕಕಾಲದಲ್ಲಿ ಅನ್ನದಾತರು ಹಾಗೂ ಬಡವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಲಾಕ್ ಡೌನ್ ತೆರವಾಗಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ತಿಂಗಳುಗಟ್ಟಲೆ ದುಡಿಮೆ ಇಲ್ಲದ ಬಡವರು ಜೀವನ ನಿರ್ವಹಣೆಗೆ ನೆರವಾಗುವ ಸಲುವಾಗಿ ದಿನಸಿ ಹಾಗೂ ತರಕಾರಿಯನ್ನು ವಿತರಿಸಲಾಗುತ್ತಿದೆ. ಕ್ಷೇತ್ರದಾದ್ಯಂತ ಮುಖಂಡರು, ಕಾರ್ಯಕರ್ತರು ಹಾಗು ಸ್ವಯಂ ಸೇವಕರ ಸಹಕಾರದೊಂದಿಗೆ ವಿತರಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಕ್ಷೇತ್ರವನ್ನು ಕೋವಿಡ್ ನಿಂದ ಮುಕ್ತಗೊಳಿಸಲು ನಿರಂತರವಾಗಿ ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದ್ದು ಬಹುತೇಕರು ಇದರ ಪ್ರಯೋಜನ ಪಡೆದಿದ್ದಾರೆ. ಜುಲೈ ಅಂತ್ಯದ ವೇಳೆಗೆ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕುವ ಕಾರ್ಯ ಮುಕ್ತಾಯವಾಗಲಿದೆ ಎಂದರು

ಜನರ ಜೀವ ರಕ್ಷಣೆ ಹಾಗೂ ಜೀವನ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದುರಾದೃಷ್ಟವಶಾತ್ ಬಲಿಯಾದ ನೂರಾರು ಕುಟುಂಬ ಸದಸ್ಯರಿಗೆ ವ್ಯಕ್ತಿಗತವಾಗಿ 1ಲಕ್ಷ ನೆರವು ನೀಡಲಾಗಿದೆ. ಕೋವಿಡ್ ಸೋಂಕು ತಹಬಂದಿಗೆ ಬರುತ್ತಿರುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿ ಕ್ಷೇತ್ರದ ಜನರ ಋಣ ತೀರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು

ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ, ಬಿಜೆಪಿ ವಾರ್ಡ್ ಅಧ್ಯಕ್ಷ ಎಂ.ಜಿ. ರವಿಶಂಕರ್. ಸಹಕಾರ ಮಹಾಮಂಡಳ ನಿರ್ದೇಶಕ ರಘು.ವಿ., ಬೆಂಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅನಂತ್ ರಾಜ್. ರಘುನಂದನ್, ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ ( ಸೂರಿ) ನಗರ ಮಂಡಲ ಉಪಾಧ್ಯಕ್ಷೆ ನಾಗವೇಣಿ ಬಿಜೆಪಿ ಮುಖಂಡರಾದ ಅಂಜನ್ ಕುಮಾರ್. ಲೋಕೇಶ್, ಶ್ರೀಧರ್, ಸವಿತಾ, ಹೇಮಾ,ರಾಜಶೇಖರ್ ಸ್ವಾಮಿ ಮತ್ತಿತರರು ಉಪಸ್ತಿತರಿದ್ದರು.

Facebook Comments

Sri Raghav

Admin