ಸೋಮಶೇಖರ್‌ಗೆ ಮಂತ್ರಿ ಸ್ಥಾನ ಗ್ಯಾರಂಟಿ : ಸಂಸದೆ ಶೋಭಾ ಕರಂದ್ಲಾಜೆ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20-ಯಶವಂತಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಟಿ. ಸೋಮಶೇಖರ್ ಗೆದ್ದರೆ ಸಚಿವರಾಗುವುದು ನೂರಕ್ಕೆ 100ರಷ್ಟು ಖಚಿತ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾಕರಂದ್ಲಾಜೆ ಭವಿಷ್ಯ ನುಡಿದರು. ಇಂದು ಬೆಳಗ್ಗೆ ಕ್ಷೇತ್ರದ ಶ್ರೀಹರಿ ಕಲ್ಯಾಣ ಮಂಟಪದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಸಚಿವೆಯಾಗಿದ್ದೆ, ಯಶವಂತಪುರ ಅದೃಷ್ಟದ ಕ್ಷೇತ್ರ ಎಂದು ಬಣ್ಣಿಸಿದರು.

ಎಸ್.ಟಿ.ಸೋಮಶೇಖರ್ ಅವರನ್ನು ಮತ ದಾರರು ಉಪಚುನಾವಣೆಯಲ್ಲಿ ಬಹುಮತಗಳಿಂದ ಆಯ್ಕೆ ಮಾಡಿ ಗೆಲ್ಲಿಸಿದರೆ ಫಲಿತಾಂಶ ಪ್ರಕಟಗೊಂಡ ಮರುದಿನವೇ ಸಚಿವರಾಗುತ್ತಾರೆ. ಇಂತಹ ಅವಕಾಶವನ್ನು ಮತದಾರರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸೋಮಶೇಖರ್ ಮತ್ತು ಯಶವಂತಪುರ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಮತದಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿರೋಧಿಗಳು ಏನೇ ಅಪಪ್ರಚಾರ ಮಾಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದೆಂದು ಶೋಭಾ ಕರಂದ್ಲಾಜೆ ಮತದಾರರಲ್ಲಿ ಮನವಿ ಮಾಡಿದರು.

ಯಶವಂತಪುರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರ ಮಾಡಬೇಕೆಂಬ ಕನಸನ್ನು ಅವರು ಹೊಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಈ ಕ್ಷೇತ್ರಕ್ಕೆ ತಮ್ಮದೇ ಆದ ದೂರದೃಷ್ಟಿ ಇಟ್ಟುಕೊಂಡಿದ್ದಾರೆ. ಈ ಬಾರಿ ಮತದಾರರು ಆಶೀರ್ವದಿಸಬೇಕೆಂದು ಪ್ರಾರ್ಥಿಸಿದರು.

ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಮಾತನಾಡಿ, ನನ್ನನ್ನು ಇಲ್ಲಿನ ಮತದಾರರು ಎರಡು ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ನ್ಯಾಯ ಸಿಗದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕಾಯಿತು. ಮತದಾರರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲದಿದ್ದರೆ ಶಾಸಕ ಸ್ಥಾನದಲ್ಲಿ ಮುಂದುವರೆಯುವ ಅಗತ್ಯವಾದರೂ ಏನು ಎಂದುಪ್ರಶ್ನಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದೆ. ಅದೇ ರೀತಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಂತಹ ಪ್ರಬಲ ನಾಯಕತ್ವದ ಬಿಜೆಪಿ ಸರ್ಕಾರವಿದೆ. ನನ್ನ ಕ್ಷೇತ್ರಕ್ಕೆ ಏನು ಬೇಕೋ ಅದನ್ನು ಒಂದು ತಿಂಗಳೊಳಗೆ ಮಾಡಿ ತೋರಿಸುವೆ. ಮತದಾರರು ಈ ಬಾರಿ ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಯಡಿಯೂರಪ್ಪನವರು ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿಗೆ ವಿಶೇಷ ಕೊಡುಗೆ ನೀಡಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಯಶವಂತಪುರದಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಅವರ ಕೈಯನ್ನು ಇನ್ನಷ್ಟು ಬಲಪಡಿಸಬೇಕು. ಮತದಾರರು ಉಪಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆಲ್ಲಿಸುವಂತೆ ಸೋಮಶೇಖರ್ ಕಳಕಳಿಯಿಂದ ಕೇಳಿಕೊಂಡರು.

Facebook Comments