ಸೋಮಶೇಖರ್ ಪರ ಅಖಾಡಕ್ಕಿಳಿದ ಶ್ರೀರಾಮುಲು,  ಯಶವಂತಪುರದಲ್ಲಿ ಅಬ್ಬರದ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.29-ಯಶವಂಪುರದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಗೆದ್ದು 24 ಗಂಟೆಯೊಳಗೆ ಮಂತ್ರಿಯಾಗಲಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

ಇಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಬಿರುಸಿನ ಪ್ರಚಾರ ನಡೆಸಿದ ಅವರು, ಈ ಕ್ಷೇತ್ರದಿಂದ ನೀವು ಕೇವಲ ಒಬ್ಬ ಶಾಸಕನನ್ನು ಮಾತ್ರ ಆಯ್ಕೆ ಮಾಡುತ್ತಿಲ್ಲ. ಬದಲಿಗೆ ಸಚಿವರನ್ನು ಆಯ್ಕೆ ಮಾಡುತ್ತಿದ್ದೀರಿ ಈ ಅವಕಾಶ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಸುಮಾರು 20 ಸಾವಿರದಷ್ಟು ವಾಲ್ಮೀಕಿ ಸಮಾಜದ ಮತದಾರರು ಇದ್ದಾರೆ. ಅವರೆಲ್ಲರೂ ಎಸ್.ಟಿ.ಸೋಮಶೇಖರ್ ಅವರನ್ನು ಬೆಂಬಲಿಸಬೇಕು. ನಿಮ್ಮ ಸೇವೆಗೆ ನಾನು ಬದ್ಧನಾಗಿರುತ್ತೇನೆ ಎಂದು ವಾಗ್ದಾನ ಮಾಡಿದರು. ಪರಿವಾರ ಮತ್ತು ತಳವಾರ ಸಮುದಾಯವನ್ನು ಎಸ್ಟಿಗೆ ಪರಿಗಣಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದಕ್ಕೆ ಯಡಿಯೂರಪ್ಪನವರೇ ಕಾರಣ. ಅವರು ರಾಜ್ಯದಲ್ಲಿ ಇನ್ನು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಸೋಮಶೇಖರ್ ಅವರು ಗೆಲ್ಲುವುದು ಅತಿಮುಖ್ಯ ಎಂದರು.

ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಇನ್ನೆರಡು ತಿಂಗಳಲ್ಲಿ ವರದಿ ನೀಡಲಿದೆ. ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವವರೆಗೂ ನಾನು ಹೋರಾಟ ಮಾಡುತ್ತೇನೆ. ಇದಕ್ಕೆ ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರದಿಂದ ಮಾತ್ರ ವಾಲ್ಮೀಕಿ ಸಮುದಾಯಕ್ಕೆ ನ್ಯಾಯಾ ಸಿಗಲು ಸಾಧ್ಯ ಎಂದು ಹೇಳಿದರು.

ಇದಕ್ಕೂ ಮುನ್ನ ಕ್ಷೇತ್ರದ ಹೇರೋಹಳ್ಳಿ, ರಾಮೋಹಳ್ಳಿ ಸೇರಿದಂತೆ ಅನೇಕ ಕಡೆ ರೋಡ್ ಶೋ, ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿ ಈ ಬಾರಿ ಯಶವಂತಪುರದಿಂದ ಎಸ್.ಟಿ.ಸೋಮಶೇಖರ್ ಅವರನ್ನು ಗೆಲ್ಲಿಸಬೇಕೆಂದುಮತದಾರರಲ್ಲಿ ಪ್ರಾರ್ಥಿಸಿದರು. ಇತ್ತ ರಾಮೋಹಳ್ಳಿಯಲ್ಲಿ ತೆರೆದ ವಾಹನದ ಮೂಲಕ ಎಸ್.ಟಿ.ಸೋಮಶೇಖರ್ ಇಂದು ಬೆಳಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದರು.

ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಮಾತನಾಡಿ, ನನಗೆ ಗೆಲ್ಲುವ ಬಗ್ಗೆ ಯಾವುದೇ ಅನುಮಾನವಿಲ್ಲ. ಎರಡು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ಕಡೆಗಣಿಸಿದ ಪರಿಣಾಮ ರಾಜೀನಾಮೆ ನೀಡಬೇಕಾಯಿತು. ಯಶವಂತಪುರ ಜನತೆ ನನ್ನನ್ನು ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments