ಸಿದ್ಧಗಂಗಾಶ್ರೀಗಳ ಆಶೀರ್ವಾದ ಪಡೆದ ಶಾಸಕ ಎಸ್.ಟಿ.ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.13- ಉಪಚುನಾವಣೆಯಲ್ಲಿ ಸೋತಿರುವವರನ್ನು ಕೈಬಿಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ನಮಸ್ಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿರುವವರನ್ನು ಕೈಬಿಡದಂತೆ ಬಿಎಸ್‍ವೈ ಅವರಲ್ಲಿ ಮನವಿ ಮಾಡಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು. ಸುಪ್ರೀಂಕೋರ್ಟ್ ಆದೇಶದಂತೆ ಸೋತಿರುವವರು ಚುನಾವಣೆಯಲ್ಲಿ ಗೆಲ್ಲಬೇಕೆಂಬ ಅನಿವಾರ್ಯತೆ ಇರುವುದರಿಂದ, ಸೋತಿರುವವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡುವ ಬಗ್ಗೆ ವರಿಷ್ಠರೊಂದಿಗೆ ಮಾತನಾಡುವುದಾಗಿ ಬಿಎಸ್‍ವೈ ತಿಳಿಸಿದ್ದಾರೆ ಎಂದರು.

ಮಂತ್ರಿಗಿರಿ ಕೇಳಿಲ್ಲ: ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಎಸ್.ಟಿ.ಸೋಮಶೇಖರ್ ಅವರು, ಮುಖ್ಯಮಂತ್ರಿ ಬಳಿ ಇದುವರೆಗೂ ಮಂತ್ರಿಗಿರಿಯನ್ನು ಕೇಳಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಮಾತ್ರ ಕೇಳಿದ್ದೇನೆ ಎಂದರು. ಉಪಚುನಾವಣೆಯಲ್ಲಿ ನನ್ನ ಪರ ಎರಡು-ಮೂರು ಬಾರಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದನೆ ಸಲ್ಲಿಸುವುದಕ್ಕಾಗಿ ಎಲ್ಲರೂ ಒಟ್ಟಿಗೆ ಹೋಗಿದ್ದಾವೆ ಹೊರತು ಬೇರೆ ಇನ್ಯಾವುದೋ ವಿಚಾರಗಳ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದರು.

ಅಪಪ್ರಚಾರ ಮಾಡಿದರೂ ಬಹುಮತ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಮುಖಂಡರು ಉಪ ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದಕ್ಕಾಗಿ ಏನೆಲ್ಲ ಅಪಪ್ರಚಾರ ನಡೆಸಿದರು ಜನರು ಕೈಬಿಡಲಿಲ್ಲ, ಸ್ಥಿರತೆ, ಅಭಿವೃದ್ಧಿ ಪರ ಸರ್ಕಾರಕ್ಕಾಗಿ ಜನರು ಬಹುಮತ ನೀಡಿದ್ದಾರೆ ಎಂದರು.

ಚುನಾವಣೆಯಲ್ಲಿಯೂ ಜನರಲ್ಲಿ ಅಭಿವೃದ್ಧಿಗಾಗಿ ಮತ ಕೇಳಿದ್ದೆ. ಜನರು ಕಳೆದ ಬಾರಿಗಿಂತ ಹೆಚ್ಚಿನ ಮತ ನೀಡಿದ್ದಾರೆ, ಅಪಪ್ರಚಾರ ಏನೇ ಮಾಡಿದರೂ ಜನರು ಅಭಿವೃದ್ಧಿಗಾಗಿ ಮತವನ್ನು ನೀಡಿದ್ದಾರೆ. ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.

ಮಠದೊಂದಿಗೆ ಹದಿನೈದು ವರ್ಷಗಳ ನಂಟು: ಹದಿನೈದು ವರ್ಷಗಳ ಹಿಂದೆ ಸಾಮೂಹಿಕ ವಿವಾಹಕ್ಕಾಗಿ ಶ್ರೀಗಳನ್ನು ಆಹ್ವಾನಿಸಲು ಶ್ರೀಮಠಕ್ಕೆ ಬಂದಿದ್ದಾ, ಅಂದಿನಿಂದಲೂ ಸಿದ್ಧಲಿಂಗ ಶ್ರೀಗಳ ಆಶೀರ್ವಾದದೊಂದಿಗೆ ಅನೇಕ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಹೆಚ್ಚಿನ ಅಧಿಕಾರ ದೊರೆಯಲಿ: ಮಠದ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಶಾಸಕ ಎಸ್.ಟಿ.ಸೋಮಶೇಖರ್ ಅವರ ಮಠದ ಒಡನಾಟದ ಬಗ್ಗೆ ಸ್ಮರಿಸಿದ ಸಿದ್ಧಲಿಂಗ ಶ್ರೀಗಳು ಸರಳ ವ್ಯಕ್ತಿತ್ವವನ್ನು ಹೊಂದಿರುವ ಸೋಮ ಶೇಖರ್ ಅವರಿಗೆ ಹೆಚ್ಚಿನ ಅಧಿಕಾರ ದೊರೆಯುವ ಮೂಲಕ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಆಶೀರ್ವದಿಸಿದರು.

Facebook Comments