“ಮುಳುಗುತ್ತಿರುವ ಕಾಂಗ್ರೆಸ್‍ ಹಡಗಿಗೆ ಡಿಕೆಶಿ ಚಾಲಕ, ಸಿದ್ದರಾಮಯ್ಯ ಮತ್ತಷ್ಟು ರಂಧ್ರ ಮಾಡ್ತಿದಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಏ.11- ಮುಳುಗುತ್ತಿರುವ ಕಾಂಗ್ರೆಸ್‍ನ ಹಡಗಿಗೆ ಡಿ.ಕೆ.ಶಿವಕುಮಾರ್ ಅದಕ್ಕೆ ಚಾಲಕನಾಗಿದ್ದು, ಅದಕ್ಕೆ ಮತ್ತಷ್ಟು ರಂಧ್ರಗಳನ್ನು ಕೊರೆಯಲು ಸಿದ್ದರಾಮಯ್ಯ ಸಿದ್ದವಾಗಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳುಗುವ ಹಡಗು ಕಾಂಗ್ರೆಸ್ ಪಕ್ಷಕ್ಕೆ ಅದರದೇ ಆದ ಸಮಸ್ಯೆಗಳಿವೆ. ನಾವ್ಯಾರು ಅದಕ್ಕೆ ರಂಧ್ರ ಮಾಡುವುದಿಲ್ಲ. ಅವರ ಪಕ್ಷದವರೇ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ರಮೇಶ್‍ಕುಮಾರು ಸೇರಿ ಹಡಗನ್ನು ಮುಳುಗಿಸಲು ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರ ಹಡಗನ್ನು ಮೇಲೇಳಲು ಬಿಡುವುದಿಲ್ಲ ಎಂದರು.

ಶಾಸಕ ಯತ್ನಾಳ್ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಸುಪ್ರೀಂ. ಅವರ ನಿರ್ಧಾರವೇ ಅಂತಿಮ. ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಅವರು ನಿರ್ಧಾರ ಮಾಡುತ್ತಾರೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಚೌಕಟ್ಟು ಮೀರಿ ಮಾತನಾಡಿದಾಗ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಹಕಾರ ಇಲಾಖೆಯ ಶಿಸ್ತುಕ್ರಮದ ಬಗ್ಗೆ ಉದಾಹರಣೆ ನೀಡಿದ ಅವರು, ಇಲಾಖೆಯಲ್ಲಿ ಅಕ್ರಮ ನಡೆದಾಗ ಕ್ರಮ ತೆಗೆದುಕೊಳ್ಳುತ್ತದೆ. ಅದು ಯತ್ನಾಳ್ ಅವರಿಗೂ ಅನ್ವಯಿಸುತ್ತದೆ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಉಸ್ತುವಾರಿಗಳು ನೋಡಿಕೊಳ್ಳುತ್ತಾರೆ. ಯಡಿಯೂರಪ್ಪನವರು ಮುಳುಗುತ್ತಿರುವ ಹಡಗಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದಕ್ಕೆ ಡ್ರೈವರ್ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಅವರ ಪಕ್ಷದವರೇ ಮೇಲೇಳಲು ಬಿಡುವುದಿಲ್ಲ ಎಂದು ಹೇಳಿದರು.

Facebook Comments

Sri Raghav

Admin