ಫುಟ್ಬಾಲ್ ಗ್ಯಾಲರಿ ಕುಸಿದು 50 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಕೇರಳ, ಜ.20- ಫುಟ್ಬಾಲ್ ಸ್ಟೇಡಿಯಂನ ತಾತ್ಕಾಲಿಕ ಗ್ಯಾಲರಿ ಕುಸಿದು ಬಿದ್ದಿದ್ದರಿಂದ 50 ಕ್ಕೂ ಹೆಚ್ಚು ಮಂದಿ ಫುಟ್ಬಾಲ್ ಅಭಿಮಾನಿಗಳು ಗಾಯಗೊಂಡಿದ್ದಾರೆ. ಫುಟ್ಬಾಲ್ ದಿಗ್ಗಜ ಆರ್.ಧನಾರ್ಜನ್ ಕುಟುಂಬಕ್ಕೆ ಧನ ಸಹಾಯ ಮಾಡುವ ಸಲುವಾಗಿ ಹಮ್ಮಿಕೊಂಡಿದ್ದ ಸಹಾಯಾರ್ಥ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ನೂರಾರು ವೀಕ್ಷಕರು ಆಗಮಿಸಿದ್ದರು, ಆದರೆ ಪಂದ್ಯ ಆರಂಭವಾಗಲು ಕೆಲವೇ ಕ್ಷಣಗಳು ಇರುವಾಗ ಸ್ಟೇಡಿಯಂನ ಒಂದು ಭಾಗದ ತಾತ್ಕಾಲಿಕ ಗ್ಯಾಲರಿ ಕುಸಿದು ಈ ಅವಘಡ ಸಂಭವಿಸಿದೆ ಆದರೂ ಯಾವುದೇ ಸಾವು ನೋವು ಸಂಭವಿಸಿಲ್ಲ.

ಘಟನೆ ನಡೆದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪಲಕ್ಕಾಡ್ ಸಂಸದ ಶ್ರೀಕಂದನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ದುರಂತ ಸಂಭವಿಸುವಾಗ ಭಾರತದ ಫುಟ್ಬಾಲ್ ದಿಗ್ಗಜರಾದ ಬೈಚುಂಗ್ ಭುಟಿಯಾ ಹಾಗೂ ಐಎಂ ವಿಜಯನ್ ಅವರು ಕೂಡ ಮೈದಾನದಲ್ಲೇ ಇದ್ದರು. ಡಿಸೆಂಬರ್ 29 ರಂದು ಮಲ್ಲಪ್ಪುರಂನ ಪೆರಿಂತಲ್ಮನ್ನದಲ್ಲಿ ಹಮ್ಮಿಕೊಂಡಿದ್ದ ಆಲ್ ಇಂಡಿಯಾ ಸೆವೆನ್ಸ್ ಟೂರ್ನಮೆಂಟ್‍ನ ವೇಳೆ ಹೃದಯಾಘಾತವಾಗಿ ಆರ್. ಧನಾರ್ಜನ್ ಸಾವನ್ನಪ್ಪಿದ್ದರು.

Facebook Comments