700 ವಿದ್ಯಾಸಂಸ್ಥೆಗಳ ಸಿಬ್ಬಂದಿ ನೇಮಕಾತಿಗೆ ಪರಿಶೀಲನೆಗೆ ಸಮಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.19- ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 700 ವಿದ್ಯಾಸಂಸ್ಥೆಗಳ ಬೋಧಕ, ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಹಲವಾರು ರೀತಿಯ ವಿಷಯಗಳನ್ನು ತಪಾಸಣೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಸರ್ಕಾರ ಸಿದ್ದ ಇದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ವಿಧಾನಪರಿಷತ್‍ನಲ್ಲಿ ನಿನ್ನೆಯಿಂದಲೂ ಜೆಡಿಎಸ್ ಸದಸ್ಯರು ಸದನ ಸಮಿತಿ ರಚನೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸಂದರ್ಭದಲ್ಲಿ ಸುದೀರ್ಘ ಉತ್ತರ ನೀಡಿದ ಸಚಿವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಿಂದ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ಈ ಮೊದಲು ಕಲಾ-ವಾಣಿಜ್ಯ ವಿಭಾಗದ ಕೋರ್ಸ್‍ಗಳನ್ನು ನಡೆಸುತ್ತಿರುವ ಕಾಲೇಜು ಆಡಳಿತ ಮಂಡಳಿಯವರು ನರ್ಸಿಂಗ್ ತರಬೇತಿಯ ಕೋರ್ಸ್‍ಗಳನ್ನು ನಡೆಸಲು ಅವಕಾಶ ಇತ್ತು.ಆದರೆ, ಭಾರತೀಯ ವೈದ್ಯಕೀಯ ಪರಿಷತ್ ಅದನ್ನು ರದ್ದುಪಡಿಸಿ ಬಿಎಸ್‍ಸಿ ಕೋರ್ಸ್‍ಗಳಿಗೆ ಮಾತ್ರ ಅವಕಾಶ ನೀಡಿದೆ. ಜಿಎನ್‍ಎಂ ನರ್ಸಿಂಗ್ ಕೋರ್ಸ್‍ಗಳನ್ನು ನಡೆಸುತ್ತಿದ್ದ ಆಡಳಿತ ಮಂಡಳಿಯವರು ತಮಗೂ ಬಿಎಸಿ ನರ್ಸಿಂಗ್ ಕೋರ್ಸ್ ನಡೆಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿವೆ.

ರಾಜ್ಯದಲ್ಲಿ 600ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳಿವೆ. 300ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ವೈದ್ಯಕೀಯ ಶಿಕ್ಷಣದ ಹಿನ್ನೆಲೆ ಇಲ್ಲದ ಅನುಭವ ಇಲ್ಲದವರು ಇಲಾಖೆ ಸಚಿವರಾಗಿ ಸಂಸ್ಥೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಅನುಮತಿ ಕೊಟ್ಟಿದ್ದಾರೆ. ಆ ಪಾಪಕರ್ಮಗಳನ್ನು ನಾವು ಅನುಭವಿಸುತ್ತಿದ್ದೇವೆ ಎಂದರು.

ನಾನು ಸಚಿವನಾದ ಮೇಲೆ ಏಕಾಏಕಿ ಯಾವುದೇ ನರ್ಸಿಂಗ್ ಕಾಲೇಜಿಗೆ ಅನುಮತಿ ನೀಡಿಲ್ಲ. ಮೂರು ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮೊದಲನೆಯದಾಗಿ ಸೆನೆಟ್ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯ, ಬೋಧಕ-ಬೋಧಕೇತರ ಸಾಮಥ್ರ್ಯದ ಅಧ್ಯಯನ ನಡೆಸಿ ವರದಿ ನೀಡಲಿದೆ. ಬಳಿಕ ರಾಜೀವ್ ಗಾಂಧಿ ಆರೋಗ್ಯ ವಿವಿಯ ಅಕಾಡೆಮಿಕ್ ಕೌನ್ಸಿಲ್ ಪರಿಶೀಲನೆ ನಡೆಸಲಿದೆ.

ಈ ಸಮಿತಿಯಲ್ಲಿ ಎರಡುಮೂರು ಪದವಿ ಪಡೆದವರು 10-15 ವರ್ಷ ವೈದ್ಯಕೀಯ ವೃತ್ತಿ ಮಾಡಿದವರು ಸದಸ್ಯರಾಗಿದ್ದಾರೆ. ಅವರು ವರದಿ ನೀಡಿದ ಬಳಿಕ ರಾಜ್ಯ ಸರ್ಕಾರ ಹೊಸದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಿರುವ ಉನ್ನತಾಧಿಕಾರ ಸಮಿತಿ ಪರಿಶೀಲನೆ ನಡೆಸಿ ನಂತರ 47 ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿದೆ.

ನಾನು ವೈದ್ಯಕೀಯ ಶಿಕ್ಷಣದ ಹಿನ್ನೆಲೆಯಿಂದ ಬಂದವನು. ವೃತ್ತಿಪರ ಅನುಭವವಿದೆ. ಈ ಹಿಂದೆ 300 ಕಾಲೇಜುಗಳಿಗೆ ಅನುಮತಿ ನೀಡಿದಾಗ ಏಕೆ ಯಾರೂ ಸದನ ಸಮಿತಿ ರಚನೆಗೆ ಕೇಳಲಿಲ್ಲ ಎಂದು ಪ್ರಶ್ನಿಸಿದರು. ಸಿಂಡಿಕೇಟ್ ಸಮಿತಿ ಶಿಫಾರಸು ಮಾಡಿದ ಸಂಸ್ಥೆಗಳ ಪೈಕಿ 15 ಸಂಖ್ಯೆಯನ್ನು ಕಡಿಮೆ ಮಾಡಿ ಉಳಿದವಕ್ಕೆ ಅನುಮತಿ ನೀಡಿದ್ದೇವೆ. ನಾವು ಅನುಮತಿ ನೀಡಿದ 47 ಕಾಲೇಜುಗಳಲ್ಲಿ ಏನಾದರೂ ಲೋಪದೋಷವಿದ್ದರೆ ಅದರ ವಿರುದ್ಧ ಕೂಡ ಕ್ರಮ ಕೈಗೊಳ್ಳುತ್ತೇವೆ.

ಕೇವಲ 47 ಕಾಲೇಜು ಮಾತ್ರವಲ್ಲ. ರಾಜ್ಯದಲ್ಲಿರುವ 600ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳ ಮೂಲಸೌಲಭ್ಯ, ಶಿಕ್ಷಣದ ಗುಣಮಟ್ಟದ ಬಗ್ಗೆ ತನಿಖೆ ನಡೆಸೋಣ. ಅರ್ಹತೆ ಇಲ್ಲದ ಗುಣಮಟ್ಟದ ಶಿಕ್ಷಣ ನೀಡದಿರುವ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸುತ್ತೇವೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜುಗಳನ್ನು ಮುಂದುವರೆಸೋಣ ಎಂದು ಹೇಳಿದರು.

ನಾನು ಸಚಿವನಾದ ಮೇಲೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇನೆ. ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಜಿಪಿಆರ್‍ಎಸ್ ಆಧಾರಿತವಾಗಿ ಗುರುತಿಸಲಾಗುತ್ತಿದೆ. ಒಂದು ವೇಳೆ ಕಟ್ಟಡ ಹಾಗೂ ಜಾಗ ಇಲ್ಲ ಎಂದಾದರೆ ಮಾನ್ಯತೆ ರದ್ದಾಗುತ್ತದೆ. ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಆಧಾರಿತ ಹಾಜರಾತಿ ಇರಬೇಕು. ಬೋಧಕ ಸಿಬ್ಬಂದಿಗಳನ್ನು ಆಧಾರ್ ಸಂಖ್ಯೆ ಮೂಲದಿಂದ ಗುರುತಿಸಬೇಕು.

ಪರೀಕ್ಷಾ ಕೊಠಡಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ರಾಜೀವ್ ಗಾಂಧಿ ಆರೋಗ್ಯ ವಿವಿಗಳ ಪರೀಕ್ಷಾ ಕೊಠಡಿಯಲ್ಲೇ ಪರೀಕ್ಷೆ ಬರೆಸಲು ಆದ್ಯತೆ ನೀಡಬೇಕು. ಸ್ಥಳೀಯ ಸ್ಥಳ ಪರಿಶೀಲನಾ ಸಮಿತಿ ಜೊಳ್ಳಾಗಿದೆ ಎಂಬ ಕಾರಣಕ್ಕಾಗಿ ಹಿರಿಯ ವೈದ್ಯಾಧಿಕಾರಿಗಳು ಮತ್ತು ಇಂಜಿನಿಯರಿಂಗ್ ವಿಭಾಗದ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ವಿದ್ಯಾರ್ಥಿಗಳ ದೂರು ನಿರ್ವಹಣೆಗೆ ಸಮಿತಿ ರಚಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ವಿವಿಗಳ ನಡುವೆ ಸಂವಹನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಪರೀಕ್ಷೆಯನ್ನೇ ಬರೆಯದೇ ಅಥವಾ ಎಲ್ಲೆಲ್ಲೂ ಪರೀಕ್ಷೆ ಬರೆಯುವುದನ್ನು ತಪ್ಪಿಸಲಾಗಿದೆ. ಅಂಕಪಟ್ಟಿಗಳನ್ನು ಆನ್‍ಲೈನ್‍ನಲ್ಲೇ ನೋಂದಣಿ ಮಾಡಬೇಕು. ಡಿಜಿ ಲಾಕರ್‍ನಲ್ಲಿ ಅಳವಡಿಸಬೇಕು ಎಂಬ ನಿಯಮ ರೂಪಿಸಲಾಗಿದೆ.
ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕ, ಅಮೂಲಾಗ್ರವಾದ ಬದಲಾವಣೆ ತರಲು ಕ್ರಮ ಕೈಗೊಳ್ಳಲಾಗಿದೆ. ಕೂದಲ ಎಳೆಯಷ್ಟು ಅನುಮಾನಕ್ಕೆ ಎಡೆ ಇಲ್ಲದಂತೆ ನಾವು ನಡೆದುಕೊಂಡಿದ್ದೇವೆ ಎಂದು ಸುಧಾಕರ್ ವಿವರಿಸಿದರು.

ಈ 600 ಕಾಲೇಜುಗಳ ಗುಣಮಟ್ಟದ ಪರಿಶೀಲನೆಗೆ ಸಮಾಜದಲ್ಲಿ ಖ್ಯಾತನಾಮರು ಎನಿಸಿಕೊಂಡ ತಜ್ಞರ ವೈದ್ಯರನ್ನೊಳಗೊಂಡ ಮೂವರ ಸಮಿತಿಯನ್ನು ರಚನೆ ಮಾಡೋಣ. ಅವರು ಪರಿಶೀಲನೆ ನಡೆಸಿ 6 ತಿಂಗಳ ಬಳಿಕ ವರದಿ ನೀಡಲಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ಹೇಳಿದರು.

Facebook Comments