ವಿದೇಶಗಳಿಂದ ಬರುವ ಪ್ರಯಾಣಿಕರಗೆ ಎಡಗೈಗೆ ಕರೋನಾ ಸ್ಟಾಂಪಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.19- ಮಹಾಮಾರಿ ಕೊರೊನಾಗೆ ಕಡಿವಾಣ ಹಾಕುವ ಉದ್ದೇಶದಿಂದ ವಿದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಎಡಗೈ ಅಂಗೈನ ಹಿಂಬದಿಗೆ ಸ್ಟಾಂಪಿಂಗ್ ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಅಳಿಸಲಾರದ ಮಸಿ ಬಳಸಿ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಎಡಗೈ ಅಂಗೈನ ಹಿಂಬದಿಗೆ ಸ್ಟಾಂಪಿಂಗ್ ಹಾಕುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್‍ಕುಮಾರ್ ಪಾಂಡೆ ಸೂಚನೆ ನೀಡಿದ್ದಾರೆ.

ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ವೈರಸ್ ಹಾವಳಿ ಮಿತಿಮೀರುತ್ತಿದ್ದು, ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹಲವಾರು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ವಿದೇಶಗಳಿಗೆ ತೆರಳಿ ವಾಪಸಾಗುವ ಭಾರತೀಯರು ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆಗೊಳಪಡಿಸಲಾಗುತ್ತಿದೆ.ಕೊರೊನಾ ವೈರಸ್ ಸೋಂಕು ಲಕ್ಷಣ ಕಾಣಿಸಿಕೊಳ್ಳುವ ವ್ಯಕ್ತಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತಿದೆ.

ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದ ವ್ಯಕ್ತಿಗಳನ್ನು ಗ್ರೂಪ್-ಎ ಎಂದು ನಮೂದಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನಡೆಸಲಾಗುತ್ತಿದೆ. ಸೋಂಕು ಉಲ್ಬಣಗೊಂಡ ವ್ಯಕ್ತಿಗಳನ್ನು ಗ್ರೂಪ್-ಬಿ ಹಾಗೂ ತೀವ್ರ ಉಲ್ಬಣಗೊಂಡ ವ್ಯಕ್ತಿಗಳನ್ನು ಗ್ರೂಪ್-ಸಿ ಎಂದು ವಿಂಗಡಿಸಿ ಆಸ್ಪತ್ರೆಯ ಪ್ರತ್ಯೇಕ ಸ್ಥಳದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿನ ಕಡಿಮೆ ಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರನ್ನು ಮನೆಗಳಿಗೆ ತೆರಳಿ 14 ದಿನಗಳ ಕಾಲ ಪ್ರತ್ಯೇಕವಾಗಿರುವಂತೆ ಸೂಚಿಸಿ ಕಳುಹಿಸಲಾಗುತ್ತಿತ್ತು. ಆದರೆ, ಈ ರೀತಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವಂತೆ ಸೂಚಿಸಿ ರವಾನಿಸಿದ ವ್ಯಕ್ತಿಗಳು ಮನೆಗಳಲ್ಲಿ ಚಿಕಿತ್ಸೆ ಪಡೆಯದೆ ಉದಾಸೀನ ಮಾಡುತ್ತಿದ್ದರು.  ಈ ರೀತಿಯ ಉದಾಸೀನದಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರ ಎಡಗೈನ ಅಂಗೈ ಹಿಂಬದಿಗೆ ಇಂದಿನಿಂದ ಸ್ಟಾಂಪಿಂಗ್ ಮಾಡುತ್ತಿದ್ದಾರೆ.

ವಿಶೇಷ ಮಸಿ ಬಳಸಿ ವಿನ್ಯಾಸಗೊಳಿಸಿರುವ ಸ್ಟಾಂಪಿಂಗ್‍ಅನ್ನು 14 ದಿನಗಳ ಕಾಲ ಅಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವಧಿ ಪೂರ್ಣಗೊಳ್ಳುವ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ 14 ದಿನಗಳ ಕಾಲ ತಮ್ಮ ಮನೆಯಲ್ಲೇ ಪ್ರತ್ಯೇಕ ನಿಗಾ ಇರಿಸಿಕೊಳ್ಳುವುದು ಅನಿವಾರ್ಯವಾಗಲಿದೆ.

Facebook Comments