ಬಿಬಿಎಂಪಿಯ 12 ಸ್ಥಾಯಿ ಸಮಿತಿಗೆ ನಡೆಯದ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಬಿಬಿಎಂಪಿಯ 12 ಸ್ಥಾಯಿಸಮಿತಿಗಳ ಸದಸ್ಯರ ಆಯ್ಕೆಗೆ ನಗರದ ಪುರಭವನದಲ್ಲಿ ಇಂದು ನಿಗದಿಯಾಗಿದ್ದ ಚುನಾವಣೆ ನಿರೀಕ್ಷೆಯಂತೆ ಮುಂದೂಡಲ್ಪಟ್ಟಿದೆ.  ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ಬೆಳಗ್ಗೆ 8.30ರಿಂದ 9.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು.

10.30 ಆದರೂ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚುನಾವಣೆಯನ್ನು ಮುಂದೂಡಲಾಯಿತು. ಡಿ.5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಿಗಧಿಯಾಗಿದ್ದರೂ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ಇಂದೇ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಆದೇಶ ಹೊರಡಿಸಿದ್ದರು.

ಉಪಚುನಾವಣೆ ನಡೆಯುತ್ತಿರುವುದರಿಮದ ಡಿ.4ರ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.ಹೀಗಾಗಿ ಚುನಾವಣೆಯನ್ನು ಮುಂದೂಡುವಂತೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಹರ್ಷಗುಪ್ತ ಅವರಿಗೆ ಮನವಿ ಮಾಡಿಕೊಂಡಿದ್ದರು.  ಆದರೆ ರಾಜಕೀಯ ಪಕ್ಷಗಳ ನಾಯಕರ ಮನವಿಗೆ ಯಾವುದೇ ಮನ್ನಣೆ ನೀಡದ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಬದಲು ಪುರಭವನದಲ್ಲಿ ನಡೆಸಲಾಗುವುದು. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದ್ದರು.

ಹೀಗಾಗಿ ಇಂದು ಪುರಭವನದಲ್ಲಿ ಅಧಿಕಾರಿಗಳು ಬಿಬಿಎಂಪಿಯ 12 ಸ್ಥಾಯಿಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಿಗದಿಪಡಿಸಿದ್ದರು. ಚುನಾವಣಾ ಸಮಯ ನಿಗಧಿಯಾಗಿದ್ದರೂ ಮೂರು ಪಕ್ಷಗಳ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಮುಂದೂಡಿದರು.

ದಿನಾಂಕ ಶೀಘ್ರ ನಿಗದಿ: ಸ್ಥಾಯಿ ಸಮಿತಿಗಳ ಒಂದು ವರ್ಷದ ಅಧಿಕಾರಾವಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಆಯುಕ್ತರು ಚುನಾವಣಾ ದಿನಾಂಕ ಪ್ರಕಟಿಸಿದ್ದರು. ಆದರೆ ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲ್ಪಟ್ಟಿದೆ. ಹೊಸದಾಗಿ ಚುನಾವಣೆ ನಡೆಸಲು ಮತ್ತೆ ಹರ್ಷಗುಪ್ತ ಅವರು ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು.

Facebook Comments