ಅಸಮಾಧಾನ, ಅತೃಪ್ತಿ ನಡುವೆಯೂ ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.18- ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಸಂದರ್ಭದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಆಡಳಿತಾರೂಢ ಬಿಜೆಪಿ ಸದಸ್ಯರೇ ತಮ್ಮ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮಾಜಿ ಸಚಿವ ಆರ್.ಅಶೋಕ್, ಶಾಸಕ ಸತೀಶ್‍ರೆಡ್ಡಿ ನಡುವೆ ಸ್ಥಾಯಿ ಸಮಿತಿ ಚುನಾವಣೆ ಸದಸ್ಯರ ಆಯ್ಕೆ ಸಂಬಂಧ ಮಾತಿನ ಚಕಮಕಿ ನಡೆದಿದ್ದು, ತಮ್ಮ ತಮ್ಮ ಬೆಂಬಲಿಗರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲು ಪೈಪೋಟಿ ಏರ್ಪಟ್ಟು ಕೊನೆ ಕ್ಷಣದವರೆಗೂ ಚುನಾವಣೆ ಕುತೂಹಲ ಮೂಡಿಸಿತ್ತು.

ಸ್ಥಾಯಿ ಸಮಿತಿ ಅಧ್ಯಕ್ಷ ವಂಚಿತ ಬಿಜೆಪಿ ಸದಸ್ಯರು ತಮ್ಮ ನಾಯಕರ ವಿರುದ್ಧ ಹರಿಹಾಯ್ದರು. ಕೆಲವು ಮಹಿಳಾ ಸದಸ್ಯರು ಕಣ್ಣೀರಿಟ್ಟು ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಶಾಸಕರ ಬೆಂಬಲಿಗರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ನಿಷ್ಠಾವಂತ ಬಿಜೆಪಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಸಚಿವ ಅಶೋಕ್ ವಿರುದ್ಧ ಬಹಿರಂಗವಾಗಿಯೇ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ನಾಯಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿ ಹೈಕಮಾಂಡ್‍ನತ್ತ ಬೊಟ್ಟು ಮಾಡಿ ತೋರಿಸಿದರು.

ಇತ್ತ ಸತೀಶ್‍ರೆಡ್ಡಿ ನಾಯಕರಿಗೆ ಸವಾಲೆಸೆದು ಸ್ಥಾಯಿ ಸಮಿತಿಗಳಿಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳು, ಸದಸ್ಯರಿಂದ ನಾಮಪತ್ರ ಸಲ್ಲಿಸಿದ್ದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಸದಸ್ಯರ ಪೈಪೋಟಿಗಿಂತ ಆಡಳಿತಾರೂಢ ಬಿಜೆಪಿ ಸದಸ್ಯರ ಪೈಪೋಟಿ, ಅಸಮಾಧಾನ, ಅತೃಪ್ತಿ ಹೆಚ್ಚಾಗಿತ್ತು. ಕೊನೆ ವರ್ಷದ ಏಳೆಂಟು ತಿಂಗಳ ಅವಧಿಗೆ ಅಧ್ಯಕ್ಷರಾಗಲು ಸಾಕಷ್ಟು ಕಸರತ್ತು ನಡೆಸಿದ್ದು ವಿಶೇಷವಾಗಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಸದಸ್ಯರ ಅವಿರೋಧ ಆಯ್ಕೆ ನಡೆಯಿತು. ಕೆಂಪೇಗೌಡ ಪೌರ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ವಿ.ಎನ್.ಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪಕ್ಷೇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬರು ಸದಸ್ಯರಾದ ಶೋಭಾ, ಭಾಗ್ಯ ಅವರು ಪಕ್ಷದ ಆದೇಶ ಮೀರಿ ನಾಮಪತ್ರ ಸಲ್ಲಿಸಿದ್ದರಾದರೂ ಮನವೊಲಿಸಿ ವಾಪಸ್ ತೆಗೆಸಲಾಯಿತು.
ಹೊಸಳ್ಳಿ ವಾರ್ಡ್‍ನ ಮಹಾಲಕ್ಷ್ಮಿ ಅವರು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆಯುತ್ತದೆ ಎಂಬ ಮಹದಾಸೆ ಹೊಂದಿದ್ದರು. ಆದರೆ, ಪಕ್ಷದ ಮುಖಂಡರು ಬೇರೆಯವರನ್ನು ಶಿಫಾರಸು ಮಾಡಿದಾಗ ನಿರಾಸೆಯಿಂದ ಕಣ್ಣೀರಿಟ್ಟ ಪ್ರಸಂಗ ಕೂಡ ಜರುಗಿತು.

ಎಚ್‍ಎಸ್‍ಆರ್ ಲೇಔಟ್‍ನ ಗುರುಮೂರ್ತಿರೆಡ್ಡಿ, ದೇವಸಂದ್ರ ವಾರ್ಡ್‍ನ ಎಂ.ಎನ್.ಶ್ರೀಕಾಂತ್ ಅವರು ತಾವು ಮಾತು ಕೊಟ್ಟು ತಪ್ಪಿದ್ದೀರಿ ಎಂದು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಅಸಹಾಯಕರಾದ ಆರ್.ಅಶೋಕ್ ಅವರು ಆ ಕರ್ಣನಂತೆ ನೀ ದಾನಿಯಾದೆ ಎಂದು ಹಾಡು ಹಾಡುವ ಮೂಲಕ ಸಮಾಧಾನ ಮಾಡುವ ಪ್ರಯತ್ನ ಮಾಡಿ ಬೇರೆಯವರಿಗೂ ಅವಕಾಶ ನೀಡಬೇಕೆಂಬುದನ್ನು ಮನದಟ್ಟು ಮಾಡಿಕೊಟ್ಟರು.

ಈ ನಡುವೆ ಪಕ್ಷೇತರ ಸದಸ್ಯ ಎನ್.ರಮೇಶ್ ಕೂಡ ತಮ್ಮ ಅಸಮಾಧಾನ ಹೊರಹಾಕಿ ಬಿಜೆಪಿಗೆ ಬೆಂಬಲ ನೀಡುವಂತೆ ಕರೆತಂದ ನಾಯಕರು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನನಗೆ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ವಿರುದ್ಧ ಪರೋಕ್ಷ ಆರೋಪ ಮಾಡಿದರು. ನನ್ನ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನಾದರೂ ಕೊಡಲಿ ಎಂದು ಆಗ್ರಹಿಸಿದರು.

ಪ್ರತಿ ಸಮಿತಿಗೆ 11 ಜನ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಹೆಚ್ಚು ಜನ ನಾಮಪತ್ರ ಸಲ್ಲಿಸಿದರೆ ಗೌಪ್ಯ ಮತದಾನ ಮಾಡಬೇಕಾಗುತ್ತದೆ. ಆದರೆ, ಅಂತಹ ಪರಿಸ್ಥಿತಿ ಪಾಲಿಕೆಯಲ್ಲಿ ನಿರ್ಮಾಣವಾಗಲಿಲ್ಲ. 12 ಸ್ಥಾಯಿ ಸಮಿತಿಗಳಿಗೂ ಸದಸ್ಯರ ಅವಿರೋಧ ಆಯ್ಕೆ ನಡೆಯಿತು.

12 ಸ್ಥಾಯಿ ಸಮಿತಿಗಳ ಸಂಭಾವ್ಯ ಅಧ್ಯಕ್ಷರ ನೇಮಕ:
* ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಹನುಮಂತಯ್ಯ
* ವಾರ್ಡ್ ಮಟ್ಟದ ಕಾಮಗಾರಿ ಸಮಿತಿ- ಜಿ.ಕೆ. ವೆಂಕಟೇಶ್
* ಬೃಹತ್ ರಸ್ತೆ ಕಾಮಗಾರಿ ಸ್ಥಾಯಿ ಸಮಿತಿ- ಮೋಹನ್‍ಕುಮಾರ್
* ಆರೋಗ್ಯ ಸ್ಥಾಯಿ ಸಮಿತಿ- ಮಂಜುನಾಥ್ ರಾಜು
* ಅಫೀಲು ಸ್ಥಾಯಿ ಸಮಿತಿ- ಲಕ್ಷ್ಮಿ ನಾರಾಯಣ್ (ಗುಂಡಣ್ಣ)
* ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್.ಶ್ರೀನಿವಾಸ್
* ಸಾರ್ವಜನಿಕ ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ
* ಮಾರುಕಟ್ಟೆ ಸ್ಥಾಯಿ ಸಮಿತಿ- ಪದ್ಮಾವತಿ
* ಲೆಕ್ಕಪತ್ರ ಸ್ಥಾಯಿ ಸಮಿತಿ- ಮಮತಾ ಸರವಣ
* ಸಿಬ್ಬಂದಿ ಆಡಳಿತ ಸುಧಾರಣಾ ಸ್ಥಾಯಿ ಸಮಿತಿ- ಅರುಣ ರವಿ
* ನಗರ ಯೋಜನೆ ಸ್ಥಾಯಿ ಸಮಿತಿ- ಆಶಾ ಸುರೇಶ್
* ತೋಟಗಾರಿಕೆ ಸ್ಥಾಯಿ ಸಮಿತಿ- ಉಮಾದೇವಿ ಅವರು ಆಯ್ಕೆಯಾಗಿದ್ದಾರೆ.

Facebook Comments