3 ಬಾರಿ ಮುಂದೂಡಿಕೆಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿಗಳ ಚುನಾವಣೆಗೆ ಮತ್ತೊಂದು ಮಹೂರ್ತ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.2- ಅಂತೂ ಇಂತೂ ಬಿಬಿಎಂಪಿ ಸ್ಥಾಯಿ ಸಮಿತಿಗಳ ಚುನಾವಣೆಗೆ ಕಾಲ ಕೂಡಿಬಂತು. ಮೂರು ಬಾರಿ ಮುಂದೂಡಿಕೆಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಇದೇ 18ರಂದು ನಡೆಸಲು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬಿಬಿಎಂಪಿಯ 12ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳಿಗೆ 18ರ ಬೆಳಗ್ಗೆ 11.30ಕ್ಕೆ ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡರ ಪೌರ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.

ಮೇಯರ್ ಆಯ್ಕೆಯಾದ ಸಂದರ್ಭದಲ್ಲಿಯೇ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಕಾಲಾವಧಿ ಮುಗಿಯದ ಹಿನ್ನೆಲೆಯಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ನಂತರ ಚುನಾವಣೆ ಘೋಷಣೆಯಾದಾಗ ಎರಡು ಬಾರಿ ಸದಸ್ಯರಲ್ಲಿ ಒಮ್ಮತ ಮೂಡಿ ಬರಲಿಲ್ಲ.

ಚುನಾವಣೆಗೆ ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಮುಂದೂಡಬೇಕಾಯಿತು. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟವಾಗಿದ್ದು, ಸಾರ್ವಜನಿಕರ ಟೀಕೆಗೂ ಕಾರಣವಾಯಿತು. ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಹಲವು ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ವಜಾಮಾಡಬೇಕೆಂದು ಆ ಪಕ್ಷದ ನಾಯಕರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ.

ಬಂಡಾಯ ಸದಸ್ಯರು ಹಾಗೂ ಪಕ್ಷೇತರರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಚುನಾವಣೆ ಮೂರು ಬಾರಿ ಮುಂದೂಡಿಕೆಯಾಗಿದ್ದು, ನಾಲ್ಕನೇ ಬಾರಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಂದಾದರೂ ಚುನಾವಣೆ ನಡೆದು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.

Facebook Comments