ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಶುರುವಾಯ್ತು ಸ್ಟಾರ್ ನಟರ ಸಿನಿಮಾ ಅಬ್ಬರ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಸ್ಟಾರ್ ಚಿತ್ರಗಳ ಪರ್ವ ಕಾಲ ಶುರುವಾಗಿದೆ. ಕೊರೊನಾದಿಂದಾಗಿ ಸುಮಾರು ಒಂದೂವರೆ ವರ್ಷಗಳಿಂದಲೂ ಚಿತ್ರಮಂದಿರಗಳಲ್ಲಿ ಸ್ಟಾರ್ ಸಿನಿಮಾಗಳನ್ನು ವೀಕ್ಷಿಸಲು ಹಾತೊರೆಯುತ್ತಿದ್ದ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ವಿತರಕರು, ಪ್ರದರ್ಶಕರ ವಲಯದವರು, ಚಿತ್ರರಂಗವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕಾರ್ಮಿಕರ ಬಾಳಿನಲ್ಲೂ ಈಗ ಹೊಸ ಬೆಳಕು ಮೂಡಿದೆ.

ಕನ್ನಡ ಚಿತ್ರರಂಗದ ಕೇಂದ್ರಬಿಂದುವಾಗಿರುವ ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ತ್ರಿವೇಣಿ, ತ್ರಿಭುವನ್, ಸಂತೋಷ್, ಮೇನಕಾ ಮುಂತಾದ ಚಿತ್ರಮಂದಿರಗಳ ಮುಂದೆ ಅಕ್ಟೋಬರ್ ಮಧ್ಯ ಭಾಗದಿಂದ ಸ್ಟಾರ್ ನಟರುಗಳ ಕಟೌಟ್‍ಗಳ ಸಂಭ್ರಮ ಮತ್ತೆ ಮನೆ ಮಾಡಲಿದೆ. ದಸರಾ ಹಾಗೂ ದೀಪಾವಳಿ ಸಮಯದಲ್ಲಿ ಸ್ಟಾರ್ ಚಿತ್ರಗಳು ತೆರೆಗೆ ಬರುತ್ತಿರುವುದರಿಂದ ನಿರ್ಮಾಪಕರು ಹಾಗೂ ನಿರ್ದೇಶಕರು ತಮ್ಮ ಚಿತ್ರಗಳ ಬಿಡುಗಡೆಗೆ ಪ್ಲಾನ್ ರೂಪಿಸಿದ್ದಾರೆ.

ಸರ್ಕಾರವು ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಶೇ. 100ರಷ್ಟು ಪ್ರದರ್ಶನವನ್ನು ಆರಂಭಿಸಬಹುದು ಎಂದು ಗ್ರೀನ್ ಸಿಗ್ನಲ್ ಕೊಟ್ಟರೂ ಸ್ಟಾರ್ ನಟರುಗಳ ಚಿತ್ರಗಳನ್ನು ಬಿಡುಗಡೆ ಮಾಡಲು ದಸರಾದವರೆಗೂ ನಿರ್ಮಾಪಕರು ಹಾಗೂ ನಿರ್ದೇಶಕರು ಕಾಯುತ್ತಿದ್ದಾರೆ, ಈ ನಡುವೆ ಇಂದು ತ್ರಿವೇಣಿ ಚಿತ್ರಮಂದಿರದಲ್ಲಿ ನವರಸ ನಾಯಕ ಗುರುರಾಜ್ ನಟನೆಯ ಕಾಗೆಮೊಟ್ಟೆ ಚಿತ್ರವು ಬಿಡುಗಡೆಯಾಗಿದ್ದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಬಹಳ ದಿನಗಳ ನಂತರ ಚಿತ್ರಮಂದಿರದಲ್ಲಿ ಸಿನಿಮಾವನ್ನು ನೋಡಲು ಖುಷಿಯಾಗುತ್ತಿದೆ.

ಸ್ಟಾರ್ ನಟರುಗಳ ಚಿತ್ರಗಳು ಬೆಳ್ಳಿ ಪರದೆಯ ಮೇಲೆ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಆಗ ಸ್ಯಾಂಡಲ್‍ವುಡ್ ಮತ್ತೆ ವೈಭವ ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

# ದುನಿಯಾ ವಿಜಯ್- ಸುದೀಪ್ ಪೈಪೋಟಿ:

ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಕೋಟಿಗೊಬ್ಬ ಚಿತ್ರವನ್ನು ನಿರ್ಮಿಸಿದ್ದ ಸೂರಪ್ಪಬಾಬು ಅವರೇ ಕಿಚ್ಚ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಚಿತ್ರವನ್ನು ನಿರ್ಮಿಸಿದ್ದು ಚಿತ್ರವು ದಸರಾ ಪ್ರಯುಕ್ತ ಅಕ್ಟೋಬರ್ 14 ರಂದು ಬೆಳ್ಳಿಪರದೆ ಮೇಲೆ ಅಪ್ಪಳಿಸಲಿದೆ. ಈ ಚಿತ್ರವು ಈಗಾಗಲೇ ತನ್ನ ಮೇಕಿಂಗ್, ಟೀಸರ್ ಹಾಗೂಪೋಸ್ಟರ್‍ನಿಂದಲೇ ಭಾರೀ ಸದ್ದು ಮಾಡಿದ್ದು ತಮ್ಮ ಮೆಚ್ಚಿನ ತಾರೆ ಸುದೀಪ್‍ರನ್ನು ಬೆಳ್ಳಿಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರಿಸುತ್ತಿದ್ದಾರೆ.

ಕೋಟಿಗೊಬ್ಬ 3 ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶಿಸಿದ್ದು, ಅರ್ಜುನ್‍ಜನ್ಯಾರ ಇಂಪಾದ ಸಂಗೀತವಿದೆ. ಶ್ರದ್ಧಾದಾಸ್, ತರುಣ್ ಸುತರ್, ರವಿಶಂಕರ್‍ರಂತಹ ದೊಡ್ಡ ತಾರಾಬಳಗವೇ ಇದೆ.

ಇನ್ನು ಅದೇ ದಿನ ಬಿಡುಗಡೆಯಾಗುತ್ತಿರುವ ದುನಿಯಾ ವಿಜಯ್ ನಟನೆಯ ಸಲಗ ಚಿತ್ರವು ಪ್ರೇಕ್ಷಕರ ಕ್ರೇಜ್ ಹೆಚ್ಚಿಸಿದೆ. ನಟನಾಗಿ ಈಗಾಗಲೇ ಅಭಿಮಾನಿಗಳನ್ನು ರಂಜಿಸಿರುವ ವಿಜಯ್ ಅವರು ಇದೇ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿರುವುದರಿಂದ ಸಲಗ ಚಿತ್ರವು ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ. ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ ಈ ಚಿತ್ರಕ್ಕೆ ಚರಣ್‍ರಾಜ್‍ರ ನಿರ್ದೇಶನವಿದ್ದು, ಸಂಜನಾ ಆನಂದ್, ಡಾಲಿ ಧನಂಜಯ್, ರಂಗಾಯಣರಘು , ಅಚ್ಯುತ್‍ಕುಮಾರ್‍ರಂತಹ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಅ.29ಕ್ಕೆ ಭಜರಂಗಿ 2 ದರ್ಶನ: ಕೊರೊನಾ ಕಾಟವಿಲ್ಲದಿದ್ದರೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‍ನ ಭಜರಂಗಿ 2 ಚಿತ್ರವು ಬಿಡುಗಡೆಯಾಗಿ ತಿಂಗಳುಗಳೇ ಕಳೆಯುತ್ತಿತ್ತು, ಆದರೆ ಕೊರೊನಾದಿಂದಾಗಿ ಚಿತ್ರಮಂದಿರದಲ್ಲಿ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡದ ಕಾರಣ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡತ್ತಲೇ ಹೋಗಿತ್ತು. ಈಗ ಅಕ್ಟೋಬರ್ 29 ರಂದು ಚಿತ್ರವು ಬೆಳ್ಳಿಪರದೆಗೆ ಅಪ್ಪಳಿಸಲಿದೆ.

ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್‍ನ ಭಜರಂಗಿ ಹಾಗೂ ವಜ್ರಕಾಯ ಚಿತ್ರಗಳು ಈಗಾಗಲೇ ಯಶಸ್ಸುಗೊಂಡಿರುವುದರಿಂದ ಭಜರಂಗಿ 2 ಚಿತ್ರದ ಮೇಲೂ ಸಾಕಷ್ಟು ಭರವಸೆ ಮೂಡಿದೆ. ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಣ ಜೋಡಿಯಾಗಿರುವ ಜಯಣ್ಣ ಹಾಗೂ ಭೋಗೇಂದ್ರ ಅವರು ಭಜರಂಗಿ 2 ಚಿತ್ರವನ್ನು ನಿರ್ಮಿಸಿದ್ದು, ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನು ಎ.ಹರ್ಷರವರೇ ಹೊತ್ತಿದ್ದಾರೆ.

ಭಜರಂಗಿ ಚಿತ್ರದಲ್ಲಿದ್ದ ಬಹುತೇಕ ಕಲಾವಿದರು ಭಜರಂಗಿ 2 ಚಿತ್ರದಲ್ಲಿದ್ದು ಇವರೊಂದಿಗೆ ಹೊಸದಾಗಿ ಭಾವನ ಮೆನನ್, ಶೃತಿ, ಶಿವರಾಜ್ ಕೆಆರ್ ಪೇಟೆ ಆಗಮನವಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಶಿವರಾಜ್‍ಕುಮಾರ್‍ರ ಬೈರಗಿ, ನೀ ಸಿಗೋವರೆಗೂ, ವೇದಾ, ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್‍ರ ಜೇಮ್ಸ್, ರಾಂಕಿಂಗ್ ಸ್ಟಾರ್ ಯಶ್‍ರ ಕೆಜಿಎಫ್ 2, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್, ಸಖತ್, ಗಾಳಿಪಟ, ದಿ ಸ್ಟೋರಿ ಆಫ್ ರಾಯಘಡ, ರಿಯಲ್‍ಸ್ಟಾರ್ ಉಪೇಂದ್ರರ ಕಬ್ಜ, ತ್ರಿಶೂಲಂ, ಲಗಾಮ್, ಬುದ್ಧಿವಂತ 2, ಕೇಜ್ರಿಸ್ಟಾರ್ ರವಿಚಂದ್ರನ್ ನಟನೆಯ ರಾಜೇಂದ್ರಪೆÇನ್ನಪ್ಪ, ಕನ್ನಡಿಗ, ರಕ್ಷಿತ್‍ಶೆಟ್ಟಿಯ ಚಾರ್ಲಿ 777 ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ಆಗಲಿವೆ.

ಒಟ್ಟಾರೆ ಕಳೆಗುಂದಿದ್ದ ಗಾಂನಗರದಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದ್ದು, ಸಿನಿಮಾ ಪ್ರೇಮಿಗಳು ಹಾಗೂ ಚಿತ್ರತಂಡದವರ
ಮುಖದಲ್ಲಿ ನಗು ಮೂಡಿದೆಯಾದರೂ, ಸ್ಟಾರ್ ಚಿತ್ರಗಳು ಸಾಲು ಸಾಲಾಗಿ ಬಿಡುಗಡೆ ಯಾಗುತ್ತಿರುವುದರಿಂದ ಚಿತ್ರಮಂದಿರಗಳ ಸಮಸ್ಯೆ ತಲೆದೋರಲಿದ್ದು, ಆ ಸಮಸ್ಯೆಯನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ಬಗೆಹರಿಸಿಕೊಳ್ಳು ವತ್ತಲೂ ಗಮನ ಹರಿಸಬೇಕಿದೆ.

Facebook Comments